
ಏಷ್ಯಾ ಕಪ್ ಟೂರ್ನಿಗೆ ಕ್ಷಣಗಣನೆ ಆರಂಬವಾಗಿದ್ದು ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಕೂಡ ಈಗ ಯುಎಇಗೆ ತಲುಪಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಮಡ ಕೂಡ ಈಗಾಗಲೇ ದುಬೈ ತಲುಪಿದ್ದು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ನಾಯಕ ಬಾಬರ್ ಅಜಂ ಭೇಟಿಯಾಗಿದ್ದು ಆತ್ಮೀಯವಾಗಿ ಪರಸ್ಪರ ಶುಭ ಹಾರೈಸಿದ್ದಾರೆ.
ಬಿಸಿಸಿಐ ಭಾರತ ತಂಡ ಯುಎಇಗೆ ತೆರಳಿದ ಬಳಿಕ ಅಲ್ಲಿ ಸಿದ್ಧತೆ ನಡೆಸುತ್ತಿರುವ ವಿಡಿಯೋವನ್ನು ಟ್ವುಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಹಾಗೂ ಪಾಕ್ ನಾಯಕ ಬಾಬರ್ ಅಜಂ ಪರಸ್ಪರ ಹಸ್ತಲಾಘವ ಮಾಡುತ್ತಿರುವ ದೃಶ್ಯ ಕೂಡ ಇದ್ದು ಇಬ್ಬರು ಆತ್ಮೀಯ ಮಾತುಕತೆ ನಡೆಸಿರುವುದು ದೃಶ್ಯದಲ್ಲಿ ದಾಖಲಾಗಿದೆ.
ಬಿಸಿಸಿಐ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಭಾರತದ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಯುಜುವೇಂದ್ರ ಚಾಹಲ್ ಕೂಡ ಅಫ್ಘಾನಿಸ್ತಾನದ ಆಟಗಾರರಾದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಜೊತೆಗೆ ಆತ್ಮೀಯವಾಗಿ ಮಾತುಕತೆ ನಡೆಸುತ್ತಿರುವ ದೃಶ್ಯಗಳಿದೆ. ಆದರೆ ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ನಡುವಿನ ಮುಖಾಮುಖಿಯ ಕ್ಷಣ ಹೆಚ್ಚು ಗಮನಸೆಳೆಯುತ್ತಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದು ಶ್ರೇಷ್ಠ ಕ್ರಿಕೆಟಿಗ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕಳೆದ ಒಂದೆರಡು ವರ್ಷಗಳಿಂದ ಮಂಕಾಗಿದ್ದು ಫಾರ್ಮ್ ಕಳೆದುಕೊಂಡು ಸಂಕಷ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ನಾಯಕ ಬಾಬರ್ ಅಜಂ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದು ಪ್ರಸ್ತುತ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದು ನಾಯಕನಾಗಿಯೂ ಪಾಕಿಸ್ತಾನ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ.
ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರವೇ ಬಾಕಿಯಿದೆ. ಶನಿವಾರ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಮುಖಾಮುಖಿಯೊಂದಿಗೆ ಸರಣಿ ಆರಂಭವಾಗಲಿದ್ದು ಭಾರತ ತಂಡ ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಕದನದ ಮೇಲೆ ಎಲ್ಲರ ದೃಷ್ಟಿಯಿದ್ದು ಅಭಿಮಾನಿಗಳು ಕುತೂಹಲದಿಂದ ಈ ಪಂದ್ಯವನ್ನು ಎದುರು ನೋಡುತ್ತಿದ್ದಾರೆ.
ಇನ್ನು ಈ ಬಾರಿಯ ಏಷ್ಯಾ ಕಪ್ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು ಟೂರ್ನಿ ಗೆಲ್ಲುವ ಫೇವರೀಟ್ ತಂಡ ಎನಿಸಿದೆ. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಈ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಯೂಜಿ ಚಾಹಲ್ ಆರ್ ಅಶ್ವಿನ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಪ್ರಮುಖ ಆಟಗಾರರಾಗಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಆವೇಶ್ ಖಾನ್