ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿದ ಕೋವಿಡ್ ವೈರಸ್ ಕ್ರೀಡಾಲೋಕದಲ್ಲಿಯೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೆಟ್ಟ ಪರಿಣಾಮವನ್ನುಂಟು ಮಾಡಿತ್ತು. ಇದೀಗ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರವೇ ಇರುವಾಗ ಮತ್ತೆ ಕೋವಿಡ್ ಆತಂಕ ಮೂಡಿಸಿದೆ. ಶ್ರೀಲಂಕಾದ ಇಬ್ಬರು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ ಎಂದು ವರದಿಯಾಗಿದೆ.
ಮೂಲಗಳ ಮಾಹಿತಿಯ ಪ್ರಕಾರ ಶ್ರೀಲಂಕಾದ ಆರಂಭಿಕ ಆಟಗಾರ ಅವಿಷ್ಕಾ ಫೆರ್ನಾಂಡೋ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕುಸಾಲ್ ಪೆರೆರ ಇಬ್ಬರಿಗೆ ಕೂಡ ಕೊರೊನಾವೈರಸ್ ದೃಢಪಟ್ಟಿದೆ ಎನ್ನಲಾಗಿದೆ. ಇಬ್ಬರು ಕೂಡ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಹಾಲಿ ಚಾಂಪಿಯನ್ ಆಗಿರುವ ಶ್ರೀಲಂಕಾ ಏಷ್ಯಾಕಪ್ 2023ರ ಆವೃತ್ತಿಗಾಗಿ ತಮ್ಮ ಸಂಭಾವ್ಯ ತಂಡವನ್ನು ಬಹಿರಂಗಪಡಿಸಿದೆ. ಅನುಭವಿ ಬ್ಯಾಟರ್ ಕುಸಲ್ ಪೆರೆರಾ ಅವರು ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ ಮತ್ತು ಪ್ರಮುಖ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ. ಇದೀಗ ಅವರು ಕೊರೊನಾವೈರಸ್‌ಗೆ ಒಳಗಾಗಿರುವುದು ತಂಡದ ಸಿದ್ಧತೆಗೆಹಿನ್ನಡೆಯುಂಟು ಮಾಡಿದೆ.
ಇನ್ನು ದಸುನ್ ಶನಕ ನೇತೃತ್ವದ ಶ್ರೀಲಂಕಾ ತಂಡ ಈ ಬಾರಿಯ ಏಷ್ಯಾಕಪ್‌ನಲ್ಲಿ ಕೆಲ ಪಂದ್ಯಗಳನ್ನು ತವರಿನಲ್ಲಿಯೇ ಆಡಲಿದೆ. ಇದು ಈ ಬಾರಿಯ ಏಷ್ಯಾಕಪ್‌ನಲ್ಲಿ ಲಂಕಾ ಪಡೆಗೆ ಹೆಚ್ಚಿನ ಅನುಕೂಲವನ್ನು ನೀಡುವ ನಿರೀಕ್ಷೆಯಿದೆ. ಆಗಸ್ಟ್ 31ರಂದು ಬಾಂಗ್ಲಾದೇಶದ ವಿರುದ್ಧ ಆಡುವ ಮೂಲಕ ಲಂಕಾ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.