ಶನಿವಾರ, ಸೆಪ್ಟೆಂಬರ್ 3ರಂದು ಪಲ್ಲೆಕೆಲ್ಲೆ ಕ್ರೀಡಾಂಗಣದಲ್ಲಿ ನಡೆದ 2023ರ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಮೂರನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದು ಆಟವನ್ನು ಮೊಟಕುಗೊಳಿಸಿತು.

ಭಾರತ ಸವಾಲಿನ ಮೊತ್ತವನ್ನು ಕಲೆಹಾಕಿತು ಮತ್ತು ಈ ಮೈದಾನದಲ್ಲಿ 267 ರನ್‌ಗಳನ್ನು ಚೇಸ್ ಮಾಡುವುದು ಕಷ್ಟಸಾಧ್ಯ. ಹೀಗಾಗಿ ಪಾಕಿಸ್ತಾನ ಸೋಲಬೇಕಿದ್ದ ಪಂದ್ಯವನ್ನು ಮಳೆ ರಕ್ಷಿಸಿತು ಎಂದು ಹೇಳಬಹುದು.
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 66 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಭಾರತದ ಅಗ್ರ ಕ್ರಮಾಂಕ ಕೈಕೊಟ್ಟ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (87 ರನ್) ಮತ್ತು ಇಶಾನ್ ಕಿಶನ್ (82 ರನ್) ತಂಡದ ಆಧಾರಸ್ತಂಭವಾದರು.
ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಏಕದಿನ ಪಂದ್ಯಗಳಲ್ಲಿ ಮೊದಲ ಬಾರಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಪ್ರಭಾವಶಾಲಿ ಪ್ರದರ್ಶನ ನೀಡಿದರು.

ಎಡಗೈ ಬ್ಯಾಟರ್ ಇಶಾನ್ ಕಿಶನ್ 81 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 82 ರನ್ ಗಳಿಸಿ ಹಲವು ದೊಡ್ಡ ದಾಖಲೆಗಳನ್ನು ಮುರಿದರು. ಇದರಲ್ಲಿ ವಿರಾಟ್ ಕೊಹ್ಲಿಯ ಅಪರೂಪದ ಸಾಧನೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.
ಏಕದಿನ ಕ್ರಿಕೆಟ್‌ನಲ್ಲಿ ಮೊದಲ 17 ಇನ್ನಿಂಗ್ಸ್ ನಂತರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಸಾಧನೆಯನ್ನು ಇಶಾನ್ ಕಿಶನ್ ಅಳಿಸಿ ಹಾಕಿದರು. ಈ ಪಟ್ಟಿಯಲ್ಲಿ ಇಶಾನ್ ಕಿಶನ್ 776 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಶುಭ್ಮನ್ ಗಿಲ್ 778 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 757 ರನ್ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದರು.
ಇನ್ನೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 750 ರನ್ ಗಳಿಸಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಇಶಾನ್ ಕಿಶನ್ 105ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿರುವ ಏಕೈಕ ಆಟಗಾರ.
ಅಲ್ಲದೆ, ಇಶಾನ್ ಕಿಶನ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ ಎರಡನೇ ವಿಕೆಟ್ ಕೀಪರ್ ಎನಿಸಿದರು. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈ ಸಾಧನೆ ಮಾಡಿದ ಮೊದಲ ಭಾರತೀಯನಾಗಿದ್ದಾರೆ.
ಇತ್ತೀಚಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಇಶಾನ್ ಕಿಶನ್ ಅವರಿಂದ ಬಂದ ಸ್ಕೋರ್‌ಗಳು 52, 55, 77 ಮತ್ತು 82 ಆಗಿದೆ.
ಇನ್ನು ಇಶಾನ್ ಕಿಶನ್ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ವಿಕೆಟ್ ಕೀಪರ್ ಆಗುವ ಸಾಧ್ಯತೆಯಿದೆ. ಒಂದು ವೇಳೆ ಕೆಎಲ್ ರಾಹುಲ್ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾದರೆ, ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಅವಕಾಶವಂಚಿತರಾಗಲಿದ್ದಾರೆ.
7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಲಿರುವ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ನೆಚ್ಚಿಕೊಂಡಿರುವುದು ಭಾರತಕ್ಕೆ ಹಿನ್ನಡೆಯಾಗಬಹುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಲಗೈ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಹೀಗಾಗಿ ಭಾರತದ ಆಡುವ 11ರ ಬಳಗದಲ್ಲಿ ಇಶಾನ್ ಕಿಶನ್ ಅವರನ್ನು ಸೇರಿಸುವುದು ಬಹಳ ಮುಖ್ಯ ಎಂದು ಹೇಳಬಹುದು. ಇಶಾನ್ ಕಿಶನ್ ಇಲ್ಲದೆ, ಭಾರತದ ಆಡುವ 11ರ ಬಳಗವು ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತದೆ.
ಕೆಎಲ್ ರಾಹುಲ್ ಫಿಟ್ನೆಸ್‌ಗೆ ಮರಳಿದ ನಂತರ ಶ್ರೀಲಂಕಾಕ್ಕೆ ಪ್ರಯಾಣಿಸಿದ್ದಾರೆ. ನೇಪಾಳ ವಿರುದ್ಧದ ಪಂದ್ಯಕ್ಕೆ ಕೆಎಲ್ ರಾಹುಲ್ ಆಡುವುದಿಲ್ಲ. ಆದರೆ, ಅದರ ಮುಂದಿನ ಪಂದ್ಯದಿಂದ ತಂಡದ ಆಯ್ಕೆಗೆ ಲಭ್ಯರಾಗಲಿದ್ದಾರೆ.
ಆದರೆ, ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಶಾನ್ ಕಿಶನ್ ಅವರನ್ನು ಕೈಬಿಟ್ಟರೆ ಅದು ಯುವ ಆಟಗಾರನಿಗೆ ಮಾಡಿದ ದ್ರೋಹವಾಗುತ್ತದೆ. ಸೂಪರ್ 4ಕ್ಕೆ ಅರ್ಹತೆ ಪಡೆದರೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯುತ್ತಾರಾ? ಅಥವಾ ಇಶಾನ್ ಕಿಶನ್ ಬೆಂಚ್ ಕಾಯಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.