ಚೀನಾಗ ಹಾಂಗ್ಜೂನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ತಂಡ ಭಾಗಿಯಾಗುತ್ತಿದೆ. ಇದೀಗ ಈ ಟೂರ್ನಿಯಲ್ಲಿ ಭಾಗವಹಿಸುವ ಭಾರತ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು ಕೆಲ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಪೂರ್ಣಸಾರ್ಥ್ಯದ ಈ ತಂಡದಲ್ಲಿ ಅಂಡರ್ 19 ತಂಡದಲ್ಲಿ ಮಿಂಚಿದ ಆಟಗಾರ್ತಿಯರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಟಿ20 ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ಭಾರತ ತಂಡವನ್ನು ಮುನ್ನಡೆಸಲಿದ್ದು ಸ್ಮೃತಿ ಮಂಧಾನ ಉಪನಾಯಕಿಯಾಗಿ ಸಾಥ್ ನೀಡಲಿದ್ದಾರೆ. ಇನ್ನು ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಬಾಂಗ್ಲಾದೇಶ ಸರಣಿಗೆ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಘೋಷ್, ಯಾಸ್ತಿಕಾ ಭಾಟಿಯಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೆ.

ಘೋಷ್ ಹೊರತುಪಡಿಸಿ ಹಿರಿಯ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕೂಡ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಅನುಭವಿ ವೇಗಿ ಶಿಖಾ ಪಾಂಡೆ ಸತತ ಏಷ್ಯನ್ ಗೇಮ್ಸ್ ತಂಡಕ್ಕೂ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇನ್ನು ಅಂಡರ್-19 ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮಿಂಚಿದ್ದ ಟೈಟಾಸ್ ಸಾಧು, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿದ ಆಲ್‌ರೌಂಡರ್ ಕನಿಕಾ ಅಹುಜಾ ಮೊದಲ ಬಾರಿಗೆ ಭಾರತ ತಂಡದ ಕರೆ ಸ್ವೀಕರಿಸಿದ್ದಾರೆ. ಆದರೆ ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಈ ತಂಡದಲ್ಲಿಯೂ ಅವಕಾಶ ದೊರೆಯದಿರುವುದು ನಿರಾಸೆ ಮೂಡಿಸಿದೆ.
ಪ್ರಸ್ತುತ ಬಾಂಗ್ಲಾದೇಶದ ಸರಣಿಯಲ್ಲಿ ಭಾರತ ತಂಡದ ಭಾಗವಾಗಿರುವ ಹರ್ಲೀನ್ ಡಿಯೋಲ್, ಪೂಜಾ ವಸ್ತ್ರಾಕರ್ ಮತ್ತು ಮುಂಬೈ ಇಂಡಿಯನ್ಸ್ ತಾರೆ ಸೈಕಾ ಇಶಾಕ್ ಸ್ಟ್ಯಾಂಡ್‌ಬೈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಯಾಸ್ತಿಕಾ, ಹರ್ಲೀನ್ ಮತ್ತು ವಸ್ತ್ರಾಕರ್ ಮಾತ್ರವಲ್ಲ, ಮೋನಿಕಾ ಪಟೇಲ್, ಮೇಘನಾ ಸಿಂಗ್, ಎಸ್ ಮೇಘನಾ ಮತ್ತು ರಾಶಿ ಕನೋಜಿಯಾ ಸೇರಿದಂತೆ ಬಾಂಗ್ಲಾದೇಶ ಸರಣಿಗೆ ಆಯ್ಕೆಯಾಗಿರುವ ಇನ್ನೂ ನಾಲ್ವರು ಆಟಗಾರರನ್ನು ಈ ತಂಡದಿಂದ ಕೈಬಿಡಲಾಗಿದೆ. ಇವರ ಪೈಕಿ ಕೆಲವರಿಗೆ ಇನ್ನೂ ಆಡುವ ಅವಕಾಶ ಕೂಡ ದೊರೆತಿಲ್ಲ.
ಮಹಿಳಾ ಸ್ಕ್ವಾಡ್ ಹೀಗಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮಂಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ತೀತಾಸ್ ಸಾಧು, ರಾಜ್ವೇಶ್ವರಿ ಘುಕ್ ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ