ಏಷ್ಯನ್ ಗೇಮ್ಸ್: ಚಿನ್ನದ ಪದಕ ಗೆಲ್ಲುವ ತವಕದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ: ಫೈನಲ್ ಪಂದ್ಯದ ಸಂಪೂರ್ಣ ಮಾಹಿತಿ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು ಗಮನಸೆಳೆಯುತ್ತಿದೆ. ಇದೀಗ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಏಷ್ಯಮ್ ಗೇಮ್ಸ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದಂತಾಗಲಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಏಕಪಕ್ಷೀಯವಾಗಿ ಗೆದ್ದು ಫೈಬಲ್‌ಗೆ ಪ್ರವೇಶಿಸಿದ ಭಾರತ ತಂಡ ಫೈನಲ್‌ನಲ್ಲಿಯೂ ಅಂಥಾದ್ದೇ ಪ್ರದರ್ಶನದ ನಿರೀಕ್ಷೆ ಹೊಂದಿದೆ. ಇನ್ನು ಮತ್ತೊಂದೆಡೆ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದ್ದು ಭಾರತಕ್ಕೆ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಇನ್ನು ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಮರಳಲಿದ್ದು ತಂಡದ ಬಲ ಮತ್ತಷ್ಟು ಹೆಚ್ಚಾಗಲಿದೆ. ಕಳೆದ ಜುಲೈನಲ್ಲಿ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ನಡತೆಗಾಗಿ ಹರ್ಮನ್‌ಪ್ರೀತ್ ಕೌರ್ ಎರಡು ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು. ಹೀಗಾಗಿ ಏಷ್ಯನ್‌ಗೇಮ್ಸ್‌ನಲ್ಲಿ ಆರಂಬಿಕ ಎರಡು ಪಂದ್ಯಕ್ಕೆ ಅನುಭವಿ ಆಟಗಾರ್ತಿ ಅಲಭ್ಯವಾಗಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಪಂದ್ಯದ ಸಮಯ ಹಾಗೂ ನೇರಪ್ರಸಾರ
ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯ ಇಂದು (ಸೆಪ್ಟೆಂಬರ್ 25) ಸೋಮವಾರ ನಡೆಯಲಿದೆ. ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 11:30ಕ್ಕೆ ಪಂದ್ಯ ಆರಂಭವಾಗಲಿದೆ. ಇನ್ನು ಸೋನಿ ಸ್ಪೋರ್ಟ್ಸ್‌ವಾಹಿನಿ ಈ ಕ್ರೀಡಾಕೂಟದ ನೇರಪ್ರಸಾರದ ಹಕ್ಕನ್ನು ಹೊಂದಿದ್ದು ಸೋನಿ ಸ್ಪೋರ್ಟ್ಸ್ ಟೆನಿ 2 SD & HD, ಸೋನಿ ಸ್ಪೋರ್ಟ್ಸ್ ಟೆನ್ 3 SD & HD ಚಾನೆಲ್‌ಗಳಲ್ಲಿ ಪಂದ್ಯವನ್ನು ನೇರವಾಗಿ ವೀಕ್ಷಿಸಬಹುದು. ಇನ್ನು ಸೋನಿ ಲಿವ್‌ನಲ್ಲಿಯೂ ಪಂದ್ಯದ ನೇರಪ್ರಸಾರವಿರಲಿದೆ.
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದ ಪಿಚ್ ನಿಧಾನಗತಿಯ ಪಿಚ್ ಆಗಿರುವ ಕಾರಣ ಇಲ್ಲಿ ಬ್ಯಾಟಿಂಗ್ ಕಠಿಣವೆನಿಸಲಿದೆ. ಪಂದ್ಯದ ಮೊದಲ ಓವರ್‌ನಿಂದಲೇ ಇಲ್ಲಿ ವೇಗಿಗಳು ಹಾಗೂ ಸ್ಪಿನ್ನರ್‌ಗಳಿಗೆ ಉತ್ತಮವಾದ ನೆರವು ದೊರೆಯಲಿದೆ. ಇಲ್ಲಿ ರನ್‌ಗಳನ್ನು ಗಳಿಸಲು ಬ್ಯಾಟರ್‌ಗಳು ತಮ್ಮ ಕಠಿಣಶ್ರಮವನ್ನು ಹಾಕಬೇಕಿದೆ. ಇನ್ನು ರನ್ ಬೆನ್ನಟ್ಟುವ ತಂಡಕ್ಕೆ ಇಲ್ಲಿ ಹೆಚ್ಚಿನ ನೆರವು ದೊರೆತಿರುವುದು ಅಂಕಿಅಂಶಗಳು ಹೇಳುತ್ತಿದೆ.
ಹವಾಮಾನ ವರದಿ
ಇನ್ನು ಈ ಪಂದ್ಯಕ್ಕೆ ಮಳೆಯ ಆತಂಕವಿಲ್ಲ. ಹೀಗಾಗಿ ಪಂದ್ಯ ಯಾವುದೇ ಆತಂಕವಿಲ್ಲದೆ ಸಂಪೂರ್ಣವಾಗಿ ನಡೆಯಲಿದೆ. 30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದ್ದು 70 ಶೇಕಡಾದಷ್ಟು ಆರ್ದ್ರತೆ ಇರಲಿದೆ ಎನ್ನಲಾಗಿದೆ.
ಇತ್ತಂಡಗಳ ಸಂಪೂರ್ಣ ಬಳಗ
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಾಕ್), ಅನುಷಾ ಬಾರೆಡ್ಡಿ, ಪೂಜಾ ವಸ್ತ್ರಾಕರ್.
ಶ್ರೀಲಂಕಾ ಬಳಗ: ಚಾಮರಿ ಅಥಪಟ್ಟು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ಇನೋಕಾ ರಣವೀರ, ಅಚಿನಿ ಕುಲಸೂರಿಯಾ, ಉದೇಶಿಕಾ ಪ್ರಬೋಧನಿ, ಇನೋಶಿ ಪ್ರಿಯದರ್ಶನಿ, ಓಷದಿ ರಣಸಿಂಗ್, ಸುಗಂದಿಕಾ ಕುಮಾರಿ, ಇಮೇಶಾ ದುಲಾನಿ, ಕೌಶಾನಿ ನುತ್ಯಾಂಗನಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications