ಮಂಗಳವಾರ, ಅಕ್ಟೋಬರ್ 3ರಂದು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 2023ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಬಲಿಷ್ಠ ಭಾರತ ತಂಡ 23 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಇದಕ್ಕೂ ಮುನ್ನ ತಮಿಳುನಾಡಿನ ಎಡಗೈ ಸ್ಪಿನ್ನರ್ ಆರ್. ಸಾಯಿ ಕಿಶೋರ್ ಅವರು ನೇಪಾಳ ವಿರುದ್ಧ ಏಷ್ಯನ್ ಗೇಮ್ಸ್ 2023ರ ಕ್ವಾರ್ಟರ್‌ಫೈನಲ್ ಪಂದ್ಯದ ಮೂಲಕ ಭಾರತ ತಂಡದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

26 ವರ್ಷದ ಸಾಯಿ ಕಿಶೋರ್ ನೇಪಾಳದ ಆರಂಭಿಕ ಆಟಗಾರ ಕುಶಾಲ್ ಭರ್ಟೆಲ್ ಅವರ ವಿಕೆಟ್‌ನೊಂದಿಗೆ 25 ರನ್ ನೀಡಿ 1 ವಿಕೆಟ್ ಮತ್ತು ಭಾರತದ 23 ರನ್‌ಗಳ ಗೆಲುವಿನಲ್ಲಿ 4 ನಿರ್ಣಾಯಕ ಕ್ಯಾಚ್‌ಗಳನ್ನು ಪಡೆದರು.
ಪಂದ್ಯಕ್ಕೂ ಮೊದಲು ಸಾಯಿ ಕಿಶೋರ್ ಅವರು ಭಾರತದ ರಾಷ್ಟ್ರಗೀತೆ ನುಡಿಸುವ ವೇಳೆ ಭಾವೋದ್ವೇಗಕ್ಕೆ ಒಳಗಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಾಯಿ ಕಿಶೋರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶಕ್ಕೂ ಮುನ್ನ ಭಾರತದ ರಾಷ್ಟ್ರಗೀತೆಯನ್ನು ನುಡಿಸುವಾಗ ಕಣ್ಣೀರು ಸುರಿಸುತ್ತಿರುವುದನ್ನು ಕಾಣಬಹುದು.
ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಮತ್ತು ಭಾರತೀಯ ದೇಶೀಯ ಟೂರ್ನಿಗಳಲ್ಲಿ ಹಲವು ಅಸಾಧಾರಣ ಋತುಗಳ ನಂತರ, ಸಾಯಿ ಕಿಶೋರ್ ಅವರನ್ನು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 2020ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂಪಾಯಿಗೆ ಖರೀದಿಸಿತು.
2021ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಗೆದ್ದ ಚೆನ್ನೈ ತಂಡದ ಸದಸ್ಯರಾಗಿದ್ದರು. ಆದಾಗ್ಯೂ, ತಂಡದೊಂದಿಗೆ ಎರಡು ಋತುಗಳನ್ನು ಕಳೆದರೂ, ತಮಿಳುನಾಡು ಕ್ರಿಕೆಟಿಗ ಯಾವುದೇ ಪಂದ್ಯದಲ್ಲಿ ಆಡಲಿಲ್ಲ.

ಐಪಿಎಲ್ 2022ರ ಹಿಂದಿನ ಮೆಗಾ ಹರಾಜಿನಲ್ಲಿ ಸಾಯಿ ಕಿಶೋರ್ ಅವರನ್ನು ಅಂದಿನ ಹೊಸ ತಂಡಗಳಲ್ಲಿ ಒಂದಾದ ಗುಜರಾತ್ ಟೈಟನ್ಸ್ 3 ಕೋಟಿ ರೂಪಾಯಿಗಳಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಸಾಯಿ ಕಿಶೋರ್ ಅವರು ಮೇ 10, 2022ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದರು. ಆ ಋತುವಿನ ಒಟ್ಟು ಐದು ಪಂದ್ಯಗಳಲ್ಲಿ ಆಡಿದ ಸಾಯಿ ಕಿಶೋರ್, 20.17ರ ಸರಾಸರಿಯೊಂದಿಗೆ ಆರು ವಿಕೆಟ್‌ಗಳನ್ನು ಪಡೆದರು.
ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಋತುವಿನಲ್ಲೇ ಟ್ರೋಫಿ ಎತ್ತಿ ಹಿಡಿಯಿತು. ಇನ್ನು 2023ರ ಐಪಿಎಲ್ ಆವೃತ್ತಿಯಲ್ಲಿ ತಂಡದಲ್ಲಿದ್ದರೂ, ಸಾಯಿ ಕಿಶೋರ್ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.
ಆರ್ ಸಾಯಿ ಕಿಶೋರ್ ಅವರ ಟಿ20 ಕ್ರಿಕೆಟ್ ಅಂಕಿಅಂಶಗಳು ಅದ್ಭುತವಾಗಿವೆ. 49 ಟಿ20 ಪಂದ್ಯಗಳಲ್ಲಿ 16.91ರ ಸರಾಸರಿ ಸರಾಸರಿಯೊಂದಿಗೆ 57 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 5.48ರ ಅಸಾಧಾರಣ ಎಕಾನಮಿ ದರವನ್ನು ಹೊಂದಿದ್ದಾರೆ.
2023ರ ಏಷ್ಯನ್ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕದ ಆಸೆಯಲ್ಲಿರುವ ಸಾಯಿ ಕಿಶೋರ್ ಭಾರತ ಕ್ರಿಕೆಟ್ ತಂಡಕ್ಕೆ ಪ್ರಮುಖ ಸ್ಪಿನ್ ಬೌಲರ್ ಆಗಿದ್ದಾರೆ.
ಇನ್ನು ಭಾರತದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಆರ್ ಸಾಯಿ ಕಿಶೋರ್ ಅವರ ಭಾರತ ತಂಡದ ಕ್ಯಾಪ್ ಅವರು ವರ್ಷಗಳಿಂದ ಮಾಡಿದ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಎಂದು ಕರೆದರು. "ಕಷ್ಟಪಟ್ಟು ದುಡಿಯುವ ಜನರಿಗೆ ಹಿಂದಿರುಗಿಸುವ ತನ್ನ ಮಾರ್ಗಗಳನ್ನು ದೇವರು ಹೊಂದಿದ್ದಾನೆ," ಎಂದು ಬರೆದುಕೊಂಡಿದ್ದಾರೆ.