David Warner: ಏಕದಿನ ವಿಶ್ವಕಪ್‌ನಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿ, ಸಚಿನ್ ತೆಂಡೂಲ್ಕರ್ ಸರಿಗಟ್ಟಿದ ಡೇವಿಡ್ ವಾರ್ನರ್
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ ಪ್ರದರ್ಶನವನ್ನು ಮುಂದುವರೆಸಿದರು.
ಬುಧವಾರ, ಅಕ್ಟೋಬರ್ 25ರಂದು ನವದೆಹಲಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ 93 ಎಸೆತಗಳಲ್ಲಿ 104 ರನ್ ಗಳಿಸುವ ಮೂಲಕ ಡೇವಿಡ್ ವಾರ್ನರ್ ಈ ಪಂದ್ಯಾವಳಿಯಲ್ಲಿ ತಮ್ಮ ಸತತ ಎರಡನೇ ಶತಕವನ್ನು ಬಾರಿಸಿದರು.

ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಡೇವಿಡ್ ವಾರ್ನರ್ ಅವರ 6ನೇ ಶತಕವಾಗಿದೆ ಮತ್ತು ಸಾರ್ವಕಾಲಿಕ ಪಟ್ಟಿಯಲ್ಲಿ ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಮಬಲ ಸಾಧಿಸಿದರು. ಇನ್ನು ತಮ್ಮ ಹೆಸರಿಗೆ 7 ಶತಕ ಹೊಂದುವ ಮೂಲಕ ಅಗ್ರಸ್ಥಾನದಲ್ಲಿರುವ ಭಾರತದ ನಾಯಕ ರೋಹಿತ್ ಶರ್ಮಾ ಅವರ ನಂತರದ ಸ್ಥಾನ ಪಡೆದರು.
ಇನ್ನು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಏಕದಿನ ವಿಶ್ವಕಪ್‌ನಲ್ಲಿ ತಲಾ ಐದು ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಡೇವಿಡ್ ವಾರ್ನರ್ ಅವರು 22ನೇ ಏಕದಿನ ಶತಕ ಗಳಿಸಿದರು ಮತ್ತು ಎಲ್ಲಾ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿಸಿದ ಸಕ್ರಿಯ ಆಟಗಾರರಲ್ಲಿ ಎರಡನೇ ಸ್ಥಾನಕ್ಕೆ ಏರಿದರು.

ಸಕ್ರಿಯ ಆಟಗಾರರಿಂದ ಹೆಚ್ಚಿನ ಶತಕಗಳು (ಇನಿಂಗ್ಸ್ ಲೆಕ್ಕದಲ್ಲಿ)
1. ವಿರಾಟ್ ಕೊಹ್ಲಿ - 78 (568)
2. ಡೇವಿಡ್ ವಾರ್ನರ್ - 48 (451)
3. ಜೋ ರೂಟ್ - 46 (432)
4. ರೋಹಿತ್ ಶರ್ಮಾ - 45 (476)
5. ಸ್ಟೀವ್ ಸ್ಮಿತ್ - 44 (366)
ಇನ್ನು ಏಕದಿನ ವಿಶ್ವಕಪ್‌ನಲ್ಲಿ ಡೇವಿಡ್ ವಾರ್ನರ್ 19 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು ಮತ್ತು ಮೈಲಿಗಲ್ಲನ್ನು ತಲುಪಿದ ವೇಗದ ಆಟಗಾರ ಎನಿಸಿದರು.
ಇದಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಆಸ್ಟ್ರೇಲಿಯಾದ ಹಿಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 124 ಎಸೆತಗಳಲ್ಲಿ 163 ರನ್ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದರು.
ಇದೀಗ ಮತ್ತೆ ಡೇವಿಡ್ ವಾರ್ನರ್ ತಮ್ಮ ತಂಡದ ಪರವಾಗಿ ತಿರುಗೇಟು ಅಬ್ಬರಿಸಲು ಯಶಸ್ವಿಯಾದರು. ಪಂದ್ಯದುದ್ದಕ್ಕೂ ಡೇವಿಡ್ ವಾರ್ನರ್ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು ಮತ್ತು ಕೇವಲ 40 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು.
ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಿಕ್ಸರ್ ಬೌಂಡರಿ ಬಾರಿಸುವುದು ಕಂಡುಬಂತು. ಅರ್ಧಶತಕದ ನಂತರ ಗೇರ್ ಬದಲಾಯಿಸಿದ ಅವರು, ಡಚ್ ಬೌಲರ್‌ಗಳಿಗೆ ದಂಡಿಸುವುದನ್ನು ಮುಂದುವರೆಸಿದರು.
ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ಎರಡು ಜೀವದಾನ ಪಡೆದರು ಮತ್ತು ಅದನ್ನು ಸದುಪಯೋಗ ಪಡೆದುಕೊಂಡರು. ಅಂತಿಮವಾಗಿ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 104 ರನ್ ಬಾರಿಸಿದರು.
ನವದೆಹಲಿಯಲ್ಲಿನ ಶತಕದೊಂದಿಗೆ, ಡೇವಿಡ್ ವಾರ್ನರ್ 2023ರ ವಿಶ್ವಕಪ್‌ನಲ್ಲಿ ಅಗ್ರ ಐದು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದರು ಮತ್ತು ಮೊಹಮ್ಮದ್ ರಿಜ್ವಾನ್, ರಚಿನ್ ರವೀಂದ್ರ ಮತ್ತು ರೋಹಿತ್ ಶರ್ಮಾರನ್ನು ಹಿಂದಿಕ್ಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications