ಬುಧವಾರ, ಅಕ್ಟೋಬರ್ 25ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ 399 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿತು.

ಇದೇ ವೇಳೆ ಕೇವಲ 40 ಎಸೆತಗಳಲ್ಲಿ ಏಕದಿನ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರು ಬರೆದರು. ಪವರ್-ಹಿಟ್ಟಿಂಗ್ ಬ್ಯಾಟಿಂಗ್ ಪ್ರದರ್ಶನದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ನೆದರ್ಲ್ಯಾಂಡ್ಸ್ ಬೌಲಿಂಗ್ ದಾಳಿಯನ್ನು ಚೂರುಚೂರು ಮಾಡಿದರು.
ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ, ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ವೇಗದ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.
2023ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು 49 ಎಸೆತಗಳಲ್ಲಿ ನಿರ್ಮಿಸಿದ ಏಕದಿನ ವಿಶ್ವಕಪ್‌ನ ವೇಗದ ಶತಕದ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಇದೇ ವಿಶ್ವಕಪ್‌ನಲ್ಲಿ ಮುರಿದರು.

40 - ಗ್ಲೆನ್ ಮ್ಯಾಕ್ಸ್‌ವೆಲ್ vs ನೆದರ್ಲ್ಯಾಂಡ್ಸ್, ದೆಹಲಿ, 2023
49 - ಏಡೆನ್ ಮಾರ್ಕ್ರಾಮ್ vs ಶ್ರೀಲಂಕಾ, ದೆಹಲಿ 2023
50 - ಕೆವಿನ್ ಒ'ಬ್ರಿಯನ್ vs ಇಂಗ್ಲೆಂಡ್, ಬೆಂಗಳೂರು 2011
51 - ಗ್ಲೆನ್ ಮ್ಯಾಕ್ಸ್‌ವೆಲ್ vs ಶ್ರೀಲಂಕಾ, ಸಿಡ್ನಿ 2015
52 - ಎಬಿ ಡಿವಿಲಿಯರ್ಸ್ vs ವೆಸ್ಟ್ ಇಂಡೀಸ್, ಸಿಡ್ನಿ 2015
31 - ಎಬಿ ಡಿವಿಲಿಯರ್ಸ್ vs ವೆಸ್ಟ್ ಇಂಡೀಸ್, ಜೋಹಾನ್ಸ್‌ಬರ್ಗ್, 2015
36 - ಕೋರೆ ಆಂಡರ್ಸನ್ vs ವೆಸ್ಟ್ ಇಂಡೀಸ್, ಕ್ವೀನ್ಸ್‌ಟೌನ್, 2014
37 - ಶಾಹಿದ್ ಅಫ್ರಿದಿ vs ಶ್ರೀಲಂಕಾ, ನೈರೋಬಿ,1996
40 - ಗ್ಲೆನ್ ಮ್ಯಾಕ್ಸ್‌ವೆಲ್ vs ನೆದರ್ಲ್ಯಾಂಡ್ಸ್, ದೆಹಲಿ, 2023
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಿಮವಾಗಿ 44 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಸಿಡಿಸಿದರು. ಮ್ಯಾಕ್ಸ್‌ವೆಲ್ ಕೊನೆಯ ಓವರ್‌ನಲ್ಲಿ 106 ರನ್ ಗಳಿಸಿದ್ದಾಗ ಲಾಗ್ನ್ ವ್ಯಾನ್ ಬೀಕ್ ಬೌಲಿಂಗ್‌ನಲ್ಲಿ ಔಟಾದರು.
ಇದಕ್ಕೂ ಮುನ್ನ ಇದೇ ನವದೆಹಲಿ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ದಾಖಲೆ ಬರೆದಿದ್ದರು.
ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತೆಂದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್‌ನ 47ನೇ ಓವರ್‌ನಲ್ಲಿ 27 ಎಸೆತಗಳಲ್ಲಿ 50 ರನ್‌ಗಳ ಗಡಿ ತಲುಪಿದರು. ನಂತರ ಅವರು 49ನೇ ಓವರ್‌ನಲ್ಲಿ ಮೂರಂಕಿ ಸಂಖ್ಯೆ ತಲುಪಿದರು ಮತ್ತು ಇದಕ್ಕೆ ಕೇವಲ 13 ಎಸೆತಗಳನ್ನು ತೆಗೆದುಕೊಂಡರು.
ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಅವರ 104 ರನ್‌ಗಳ ಭರ್ಜರಿ ಶತಕ, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಅವರ ಅರ್ಧಶತಕಗಳು ಹಾಗೂ ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬಿಗ್-ಹಿಟ್ಟಿಂಗ್ ಪ್ರೇಕ್ಷಕರನ್ನು ರಂಜಿಸಿದವು.
ನೆದರ್ಲ್ಯಾಂಡ್ಸ್ ತಂಡದ ಬಾಸ್ ಡಿ ಲೀಡೆ ಅವರು 10 ಓವರ್‌ಗಳಲ್ಲಿ 115 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಬೌಲರ್ ಎನಿಸಿದರು.