Aus vs SA 1st Test: ಆಸ್ಟ್ರೇಲಿಯಾ ಮಿಂಚಿನ ಬೌಲಿಂಗ್, 152 ರನ್‌ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 152 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಸ್ಟ್ರೇಲಿಯಾ ಬೌಲಿಂಗ್ ದಾಳಿ ಸಂಘಟಿಸಿತು. ವೇಗಿ ಮಿಚೆಲ್ ಸ್ಟಾರ್ಕ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು.
27 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಟೆಂಬಾ ಬವುಮಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರ್ರೆನ್ 98 ರನ್‌ಗಳ ಜೊತೆಯಾಟ ಆಡುವ ಮೂಲಕ ಆಸರೆಯಾದರು. ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರ್ರೆನ್ 64 ರನ್ ಗಳಿಸಿದರೆ, ಟೆಂಬಾ ಬವುಮಾ 38 ರನ್ ಗಳಿಸಿದರು. ಆದರೆ, ಇವರಿಬ್ಬರ ವಿಕೆಟ್ ಪತನದ ನಂತರ ಉಳಿದ ಆಟಗಾರರು ರನ್ ಗಳಿಸುವಲ್ಲಿ ವಿಫಲವಾದರು.
ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ನಾಥನ್ ಲಿಯಾನ್ ಕೂಡ 3 ವಿಕೆಟ್ ಪಡೆದು ಹರಿಣಗಳನ್ನು ಕಾಡಿದರು. ನಾಯಕ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೊಲ್ಯಾಂಡ್ ತಲಾ 2 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು 152 ರನ್‌ಗಳಿಗೆ ಆಲೌಟ್ ಆಗಲು ಕಾರಣವಾದರು.

ಆಸ್ಟ್ರೇಲಿಯಾ ತಂಡಕ್ಕೂ ಆಘಾತ
ದಕ್ಷಿಣ ಆಫ್ರಿಕಾವನ್ನು 152 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ವಿಶ್ವಾಸದಲ್ಲೇ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಿಸಿದೆ.
ಇನ್ನಿಂಗ್ಸ್‌ನ ಮೊದಲನೇ ಎಸೆತದಲ್ಲೇ ವೇಗಿ ಕಗಿಸೋ ರಬಾಡ ಡೇವಿಡ್ ವಾರ್ನರ್ ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. ಭಾರತೀಯ ಕಾಲಮಾನ ಬೆಳಿಗ್ಗೆ 11.40 ವೇಳಗೆ ಆಸ್ಟ್ರೇಲಿಯಾ 33 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದೆ.
ರಬಾಡ, ಎನ್ರಿಚ್ ನೋಕಿಯಾ, ಮ್ಯಾಕ್ರೊ ಜಾನ್ಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಡೇವಿಡ್ ವಾರ್ನರ್, ಮಾರ್ನಸ್ ಲಾಬುಸ್ಚಾಗ್ನೆ, ಉಸ್ಮಾನ್ ಖವಾಜ ಔಟ್ ಆಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡಕ್ಕೆ ಮಹತ್ವದ ಸರಣಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ರೇಸ್‌ಗಾಗಿ ಮೂರು ತಂಡಗಳು ಮುಂಚೂಣಿಯಲ್ಲಿವೆ. ಪಾಕಿಸ್ತಾನ ಈಗಾಗಲೇ ಫೈನಲ್ ರೇಸ್‌ನಿಂದ ಹೊರಬಿದ್ದಿದೆ, ಶ್ರೀಲಂಕಾ ತಂಡಕ್ಕೆ ಇನ್ನೊಂದು ಪಂದ್ಯ ಮಾತ್ರ ಉಳಿದಿದ್ದು, ಅದು ಫೈನಲ್ ಪ್ರವೇಶಿಸುವ ಸಾಧ್ಯತೆ ಇಲ್ಲ. ಆದರೆ, ಆಸ್ಟ್ರೇಲಿಯಾ, ಭಾರತ, ದಕ್ಷಿಣ ಆಫ್ರಿಕಾ ತಂಡಗಳಿಗೆ ಫೈನಲ್‌ನಲ್ಲಿ ಆಡುವ ಅವಕಾಶ ಇದೆ.
ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ, ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸೋತರೆ, ಭಾರತದ ಹಾದಿ ಸುಲಭವಾಗಲಿದೆ. ಆದ್ದರಿಂದಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಟೆಸ್ಟ್ ಸರಣಿ ಮಹತ್ವದ್ದಾಗಿದೆ.

ಉಭಯ ತಂಡಗಳ ಆಡುವ ಬಳಗ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಖಯಾ ಜೊಂಡೋ, ಕೈಲ್ ವೆರ್ರೆನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೊಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications