ಭಾನುವಾರ, ಸೆಪ್ಟೆಂಬರ್ 17ರಂದು ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಏಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿತು.

316 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ಅರ್ಧಶತಕದ ಹೊರತಾಗಿಯೂ ಕೇವಲ 34.1 ಓವರ್‌ಗಳಲ್ಲಿ 193 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 122 ರನ್‌ಗಳ ಬೃಹತ್ ಗೆಲುವು ಸಾಧಿಸಿತು.
ಅಲ್ಲದೆ, ಮೊದಲೆರಡು ಏಕದಿನ ಪಂದ್ಯಗಳನ್ನು ಸೋತ ನಂತರ, ದಕ್ಷಿಣ ಆಫ್ರಿಕಾ ತಂಡ ಜಿದ್ದಿಗೆ ಬಿದ್ದು ಕೊನೆಯ ಮೂರು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಂಡಿತು.

ದಕ್ಷಿಣ ಆಫ್ರಿಕಾ ಎಡಗೈ ವೇಗಿ ಮಾರ್ಕೊ ಜಾನ್ಸೆನ್ ಮೊದಲ ಐದು ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. 39 ರನ್ ನೀಡಿ ಐದು ವಿಕೆಟ್ ಪಡೆದು ಮಿಂಚಿದರು.
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಉತ್ತಮ ಮುನ್ಸೂಚನೆ ನೀಡಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ, ತಂಡವು ಉತ್ತಮವಾಗಿ ಮರಳಿದೆ ಎಂದು ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹೇಳಿದ್ದಾರೆ.
ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಎದುರಾಳಿಯನ್ನು ಬ್ಯಾಟಿಂಗ್‌ಗೆ ಕಳುಹಿಸಿದ ನಂತರ, ದಕ್ಷಿಣ ಆಫ್ರಿಕಾ ಕೊನೆಯ ಮೂರು ಪಂದ್ಯಗಳಲ್ಲಿ ಪ್ರತಿಯೊಂದನ್ನು 100ಕ್ಕೂ ಅಧಿಕ ರನ್‌ಗಳಿಂದ ಗೆದ್ದುಕೊಂಡಿದೆ.
ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಮಾತನಾಡಿ, ""ನಾವು ಕಳೆದ ಮೂರು ಪಂದ್ಯಗಳಲ್ಲಿ ಆಲೌಟ್ ಆಗಿದ್ದೇವೆ. ಆದರೆ ನಾವು ಶುಕ್ರವಾರ ಭಾರತದಲ್ಲಿ ಏಕದಿನ ಪಂದ್ಯವನ್ನು ಆಡಲಿದ್ದೇವೆ, ಬಹಳಷ್ಟು ಆಟಗಾರರು ಹಿಂತಿರುಗುತ್ತಿದ್ದಾರೆ ಮತ್ತು ಮುಂದೆ ದೊಡ್ಡ ವಿಶ್ವಕಪ್ ಬರಲಿದೆ,'' ಎಂದರು.
ಖಾಯಂ ನಾಯಕ ಪ್ಯಾಟ್ ಕಮಿನ್ಸ್, ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಸೇರಿದಂತೆ ಪ್ರಮುಖ ಆಟಗಾರರು ಶುಕ್ರವಾರ ಮೊಹಾಲಿಯಲ್ಲಿ ಪ್ರಾರಂಭವಾಗುವ ಭಾರತ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಏಡೆನ್ ಮಾರ್ಕ್ರಾಮ್ ಮತ್ತೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 93 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 63 ರನ್ ಗಳಿಸಿ ಐದನೇ ವಿಕೆಟ್‌ಗೆ 109 ರನ್‌ಗಳ ಜೊತೆಯಾಟ ನಿರ್ಮಿಸಿದರು.
ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಾರ್ಕೊ ಜಾನ್ಸೆನ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ ಅವರು ಕೊನೆಯಲ್ಲಿ ಕೆಲವು ದೊಡ್ಡ ಹೊಡೆತಗಳ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿದರು.
ಮಾರ್ಕೊ ಜಾನ್ಸೆನ್ 29 ಎಸೆತಗಳಲ್ಲಿ ಮೂರು ಸಿಕ್ಸರ್ ಸಮೇತ 47 ರನ್ ಗಳಿಸಿದರೆ ಮತ್ತು ಫೆಹ್ಲುಕ್ವಾಯೊ 19 ಎಸೆತಗಳಲ್ಲಿ ನಾಲ್ಕು ಬಾರಿ ಬೌಂಡರಿ ಸಹಿತ ಅಜೇಯ 39 ರನ್ ಬಾರಿಸಿದರು.
ಆಸ್ಟ್ರೇಲಿಯಾ ತಂಡದ ಪರ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಇನ್ನಿಂಗ್ಸ್‌ನ ಮೊದಲ ಮೂರು ಓವರ್‌ಗಳಲ್ಲಿ 34 ರನ್ ಸಿಡಿಸಿದರು. ಆದರೆ ಮಾರ್ಕೊ ಜಾನ್ಸೆನ್ ದಾಳಿಗೆ ಇಳಿದ ನಂತರ, ಡೇವಿಡ್ ವಾರ್ನರ್ ಮತ್ತು ಜೋಸ್ ಇಂಗ್ಲಿಸ್ ಅವರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದರು.
ಮಿಚೆಲ್ ಮಾರ್ಷ್ (71 ರನ್) ಮತ್ತು ಮಾರ್ನಸ್ ಲ್ಯಾಬುಸ್‌ಚಾಗ್ನೆ (44 ರನ್) ಮೂರನೇ ವಿಕೆಟ್‌ಗೆ 90 ರನ್ ಗಳಿಸಿದರು. ಆದರೆ, ಮಾರ್ಕೊ ಜಾನ್ಸೆನ್ ಏಳು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದರು.