ಗುರುವಾರ, ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಚೋಕರ್ಸ್ ಕುಖ್ಯಾತಿಯ ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿಯಾಗಿದೆ.
ಕೋಲ್ಕತ್ತಾದಲ್ಲಿ ಬೆಳಿಗ್ಗೆಯಿಂದ ಮಳೆ ಆಗಾಗ ಬರುತ್ತಿದೆ. ಟಾಸ್‌ಗೂ ಮುನ್ನ ಮಳೆ ಬಂದಿತ್ತು. ಬಳಿಕ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು.
ನಂತರ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನ 14ನೇ ಓವರ್‌ನ ನಂತರ ಮತ್ತೆ ವರುಣನ ಆಗಮನವಾಗಿ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಈ ವೇಳೆಗೆ ದಕ್ಷಿಣ ಆಫ್ರಿಕಾ ತಂಡ 44 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.

ಇದೀಗ ಮೈದಾನದಿಂದ ಕವರ್‌ಗಳನ್ನು ತೆಗೆಯಲಾಗಿದೆ ಮತ್ತು ಆಟವನ್ನು ಮುಂದುವರೆಸಲಾಗಿದೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಇದ್ದೇ ಇದೆ.
* ಮಳೆಯಿಂದಾಗಿ ಗುರುವಾರದ ಪಂದ್ಯ ರದ್ದು ಅಥವಾ ಸ್ಥಗಿತಗೊಂಡರೆ, ನಾಳೆ (ಶುಕ್ರವಾರ, ನವೆಂಬರ್ 17) ಮೀಸಲು ದಿನದಂದು ಆಟವನ್ನು ಮುಂದುವರೆಸಲಾಗುತ್ತದೆ.
* ಮೀಸಲು ದಿನದಂದೂ ಮಳೆ ಮುಂದುವರಿದರೆ ಲೀಗ್ ಹಂತದ ಅಂಕಪಟ್ಟಿ ಅನುಗುಣವಾಗಿ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
* ಸದ್ಯಕ್ಕೆ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.

ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಮಳೆಯನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಮತ್ತು ಮಳೆಯ ಶಾಪ ಈ ವಿಶ್ವಕಪ್‌ನಲ್ಲೂ ಮುಂದುವರೆದಿದೆ.
1992ರಿಂದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ವರುಣದೇವ ದಕ್ಷಿಣ ಆಫ್ರಿಕಾ ತಂಡದ ಫೈನಲ್ ಕನಸನ್ನು ಹೇಗೆ ನುಚ್ಚುನೂರು ಮಾಡಿದೆ ಎಂಬುದರ ಮಾಹಿತಿ ಇಲ್ಲಿದೆ.
1992ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಪ್ರವೇಶ ಮಾಡಿತು ಮತ್ತು ಅದೇ ವರ್ಷದಲ್ಲಿ ಕೆಪ್ಲರ್ ವೆಸೆಲ್ಸ್ ನಾಯಕತ್ವದಲ್ಲಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿತು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಳೆಯು ಹರಿಣ ಪಡೆಯ ವಿಶ್ವಕಪ್ ಆಸೆಯನ್ನು ಹಾಳುಮಾಡಿತು.
ಈ ಪಂದ್ಯವನ್ನು ಗೆಲ್ಲಲು ಮತ್ತು ಪಂದ್ಯಾವಳಿಯ ಫೈನಲ್ ತಲುಪಲು ದಕ್ಷಿಣ ಆಫ್ರಿಕಾ ತಂಡಕ್ಕೆ 13 ಎಸೆತಗಳಲ್ಲಿ 22 ರನ್‌ಗಳ ಅಗತ್ಯವಿತ್ತು. ಆದಾಗ್ಯೂ, ಅವರ ಕನಸನ್ನು ಹಾಳುಮಾಡಲು ಸ್ವಲ್ಪ ಮಳೆ ಬಂದೇ ಬಿಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ತಂಡದ ಕಡಿಮೆ ಮೊತ್ತವು, ಓವರ್‌ಗಳಿಗೆ ಅನುಗುಣವಾಗಿ ಗುರಿಯನ್ನು ಕಡಿತಗೊಳಿಸಬೇಕೆಂದು ನಿರ್ಧರಿಸಲಾಯಿತು. ಮಳೆ ನಿಂತ ನಂತರ, ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ ಒಂದು ಎಸೆತದಲ್ಲಿ 21 ರನ್ ಗಳಿಸಬೇಕಾಯಿತು. ಇದು ಅಸಾಧ್ಯವಾಗಿತ್ತು.

2003ರಲ್ಲಿ ತಪ್ಪಾಗಿ ಲೆಕ್ಕಾಚಾರ ಮಾಡಿದ ಡಕ್ವರ್ಥ್ ಲೂಯಿಸ್ ನಿಯಮವು ಶ್ರೀಲಂಕಾ ವಿರುದ್ಧ ಸೋತು ಸೂಪರ್ 6ನಲ್ಲಿ ಅರ್ಹತೆ ಪಡೆಯಲು ವಿಫಲವಾಯಿತು.
2015ರಲ್ಲಿ ಆಸ್ಟ್ರೇಲಿಯಾದ ಈಡನ್ ಪಾರ್ಕ್‌ನಲ್ಲಿ ಮಳೆ-ಬಾಧಿತ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿ ನಿರಾಸೆಯತ ಮುಖ ಹೊತ್ತು ತವರಿಗೆ ಮರಳಬೇಕಾಯಿತು.
ಇದೀಗ 2023ರಲ್ಲಿ ಮೋಡ ಕವಿದ ವಾತಾವರಣದಲ್ಲಿ 2ನೇ ಸೆಮಿಫೈನಲ್ ಪಂದ್ಯದಲ್ಲಿ 14 ಓವರ್‌ಗಳಲ್ಲಿ 44 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ, ಮಳೆ ಅಡ್ಡಿಪಡಿಸಿತು. ಈ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಎರಡು ಬಾರಿ ಮಳೆ ಕಾಟ ಕೊಟ್ಟಿದೆ.
ಈ ಲೇಖನ ಬರೆಯುವ ಹೊತ್ತಿಗೆ ದಕ್ಷಿಣ ಆಫ್ರಿಕಾ ತಂಡವು 24 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ಕ್ರೀಸ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.