
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಕೂಡ ರೋಚಕವಾಗಿ ಅಂತ್ಯವಾಗಿದೆ. ಪಲ್ಲೆಕೆಲೆಯಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರೂ ಬೌಲಿಂಗ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಶ್ರೀಲಂಕಾ ಪಡೆ 26 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಮೊದಲ ಪಂದ್ಯದ ಹೀರೋ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿಯೂ ಆಸಿಸ್ ಪಡೆಗೆ ಆಸರೆಯಾಗುವ ಲಕ್ಷಣ ತೋರಿದರಾದರೂ 30 ರನ್‌ಗಳಿಗೆ ಮ್ಯಾಕ್ಸಿ ಹೋರಾಟ ಅಂತ್ಯವಾಯಿತು.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ದೊಡ್ಡ ಮೊತ್ತವನ್ನು ಪೇರಿಸಲು ವಿಫಲವಾಯಿತು. ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ 300 ರನ್‌ಗಳ ಗುರಿಯನ್ನು ನೀಡಿದ್ದ ಶ್ರೀಲಂಕಾ ತಂಡದ ಮೊತ್ತವನ್ನು ಆಸ್ಟ್ರೇಲಿಯಾ ಪಡೆ ಮೀರಿ ನಿಂತಿತ್ತು. ಇಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮಳೆಯಿಂದಾಗಿ ಪಂದ್ಯ ಸ್ಥಗಿತವಾದಾಗ 9 ವಿಕೆಟ್ ಕಳೆದುಕೊಂಡು 220 ರನ್‌ಗಳನ್ನಷ್ಟೇ ಗಳಿಸಿತ್ತು. ಶ್ರೀಲಂಕಾದ ಯಾವ ಆಟಗಾರ ಕೂಡ ಅರ್ಧ ಶತಕವನ್ನು ಕೂಡ ಗಳಿಸಲು ವಿಫಲವಾದರು.
ಮಳೆಯ ಕಾರಣದಿಂದಾಗಿ ಡಿಎಲ್‌ಎಸ್ ನಿಯಮದಲ್ಲಿ ಆಸ್ಟ್ರೇಲಿಯಾ ತಂಡ 43 ಓವರ್‌ಗಳಲ್ಲಿ 216 ರನ್‌ಗಳ ಸವಾಲು ಪಡೆದುಕೊಂಡಿತ್ತು. ಈ ಮೊತ್ತವನ್ನು ಆಸ್ಟ್ರೇಲಿಯಾ ಸುಲಭವಾಗಿ ಗೆಲ್ಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಶ್ರೀಲಂಕಾ ಬೌಲರ್‌ಗಳು ಇದಕ್ಕೆ ಅಡ್ಡಿಯಾದರು.
ಆಸ್ಟ್ರೇಲಿಯಾದ ಯಾವ ಆಟಗಾರ ಕೂಡ ದೊಡ್ಡ ಮೊತ್ತವನ್ನು ಗಳಿಸದಂತೆ ತಡೆಯುವಲ್ಲಿ ಶ್ರೀಲಂಕಾ ಆಟಗಾರರು ಯಶಸ್ವಿಯಾದರು. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹಾಗೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾತ್ರವೇ 30ರ ಗಡಿ ದಾಟಲು ಯಶಸ್ವಿಯಾದರು. ಸುಲಭ ಸವಾಲು ಪಡೆದಿದ್ದ ಆಸ್ಟ್ರೇಲಿಯಾ ತಂಡ 189 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 26 ರನ್‌ಗಳ ಅಂತರದ ಸೋಲು ಅನುಭವಿಸಿದೆ.
ಶ್ರೀಲಂಕಾ ಪರವಾಗಿ ಚಮಿಕಾ ಕರುಣರತ್ನೆ ಮೂರು ವಿಕೆಟ್ ಪಡೆದು ಮಿಂಚಿದರೆ ದುಶ್ಮಂತ ಚಮೀರಾ, ಧನಂಜಯ ಡಿಸಿಲ್ವ ಹಾಗೂ ಧುನಿತ್ ವೆಲ್ಲಾಲಗೆ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನಿಡಿದರು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ.
ಶ್ರೀಲಂಕಾ ಪ್ಲೇಯಿಂಗ್ XI: ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನ, ಜೆಫ್ರಿ ವಂಡರ್ಸೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ
ಬೆಂಚ್: ವನಿಂದು ಹಸರಂಗ, ದಿನೇಶ್ ಚಂಡಿಮಲ್, ಭಾನುಕಾ ರಾಜಪಕ್ಸೆ, ನಿರೋಶನ್ ಡಿಕ್ವೆಲ್ಲಾ, ಲಹಿರು ಮಧುಶಂಕ, ರಮೇಶ್ ಮೆಂಡಿಸ್, ಅಸಿತ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ಪ್ರಮೋದ್ ಮದುಶನ್, ನುವಾನ್ ತುಷಾರ
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಝೈ ರಿಚರ್ಡ್ಸನ್, ಜೋಶ್ ಇಂಗ್ಲಿಸ್, ಕ್ಯಾಮೆರಾನ್ ಗ್ರೀನ್