ಆಸ್ಟ್ರೇಲಿಯಾ vs ಶ್ರೀಲಂಕಾ: ಮ್ಯಾಕ್ಸ್‌ವೆಲ್ ಮತ್ತೊಂದು ಮ್ಯಾಚ್ ವಿನ್ನಿಂಗ್ ಆಟ, ಲಂಕಾ ವಿರುದ್ಧ ಭರ್ಜರಿ ಜಯ

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗಿಯಾಗಿರುವ ಶ್ರೀಲಂಕಾ ಹೀನಾಯ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಟಿ20 ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬಿಟ್ಟುಕೊಟ್ಟಿದ್ದ ಶ್ರೀಲಂಕಾ ನಾಲ್ಕನೇ ಪಂದ್ಯದಲ್ಲಿಯೂ ಸೋಲಿನ ಸರಪಳಿಯನ್ನು ಮುಂದುವರಿಸಿದೆ. ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡದ ಮುಂದೆ ಲಂಕಾ ಪಡೆ ಯಾವ ಹಂತದಲ್ಲಿಯೂ ಪ್ರತಿರೋಧವನ್ನು ಒಡ್ಡುವಲ್ಲಿ ವಿಫಲವಾಗಿದ್ದು ಅಂತಿಮ ಪಂದ್ಯವನ್ನು 6 ವಿಕೆಟ್‌ಗಳ ಅಂತರದಿಂದ ಕಳೆದುಕೊಂಡಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲಿ ಪಡೆದ ಶ್ರೀಲಂಕಾ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲಿ 35 ರನ್‌ಗಳಿಸಿದ್ದ ಶ್ರೀಲಂಕಾ ಆರಂಭಿಕ ಆಟಗಾರ ಗುಣತಿಲಕ ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ವಿಕೆಟ್ ಕಳೆದುಕೊಂಡ ನಂತರ ಲಂಕಾ ತಂಡದ ರನ್ ವೇಗ ನಿಧಾನವಾಯಿತು. ಎರಡನೇ ವಿಕೆಟ್‌ಗೆ ಕೂಡ ಸಾಧಾರಣ ಜೊತೆಯಾಟ ಪಡೆದ ಲಂಕಾ ಬ್ಯಾಟರ್‌ಗಳ ಮೇಲೆ ಆಸಿಸ್ ಬೌಲರ್‌ಗಳು ಹಿಡಿತ ಸಾಧಿಸಿದ್ದರು. ಶ್ರೀಲಂಕಾದ ಮಧ್ಯಮ ಹಾಗೂ ಕೆಲ ಕ್ರಮಾಂಕದ ಆಟಗಾರರು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದರು. ಇದರ ಪರಿಣಾಮವಾಗಿ ಶ್ರೀಲಂಕಾ ಈ ಪಂದ್ಯದಲ್ಲಿ ಕೇವಲ 139 ರನ್‌ಗಳನ್ನು ಮಾತ್ರ ಗಳಿಸಲು ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ತಂಡದ ಪರವಾಗಿ ಝೇ ರಿಚರ್ಡ್ಸನ್ ಹಾಗೂ ಕೇನ್ ರಿಚರ್ಡ್ಸನ್ ತಲಾ 2 ವಿಕೆಟ್ ಕಬಳಿಸಿದರು.
ಇನ್ನು ಶ್ರೀಲಂಕಾ ನೀಡಿದ 140 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ಬೆನ್ ಮೆಕ್‌ಡರ್ಮಾಟ್ ಹಾಗೂ ನಾಯಕ ಆರೋನ್ ಫಿಂಚ್ ತಂಡದ ಮೊತ್ತ 32 ರನ್‌ಗಳಾಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿದ್ದರು. 49 ರನ್ ಆಗುವಷ್ಟರಲ್ಲಿ ಆಶ್ಟನ್ ಅಗರ್ ಕೂಡ ವಿಕೆಟ್ ಕಳೆದುಕೊಂಡಿದ್ದರು. ಆದರೆ ನಂತರ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋಶ್ ಇಂಗ್ಲಿಸ್ ಉತ್ತಮ ಜೊತೆಯಾಟ ನೀಡುವ ಮೂಲಕ ಆಸ್ಟ್ರೇಲಿಯಾವನ್ನು ಗೆಲುವಿನತ್ತ ಸಾಗಿಸಿದರು.
ಜೋಶ್ ಇಂಗ್ಲಿಸ್ ಕೇವಲ 20 ಎಸೆತಗಳಲ್ಲಿ 40 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರೆ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 48 ರನ್ ಬಾರಿಸಿದ್ದಾರೆ. ಈ ಮೂಲಕ ಇನ್ನೂ 11 ಎಸೆತಗಳು ಬಾಕಿಯೊರುವಂತೆಯೇ ಆಸ್ಟ್ರೇಲಿಯಾ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಲಂಕಾ ಪರವಾಗಿ ಲಹಿರು ಕುಮಾರ 2 ವಿಕೆಟ್ ಕಬಳಿಸಿ ಮಿಂಚಿದರು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪಡೆ 5 ಪಂದ್ಯಗಳ ಟಿ20 ಸರಣಿಯಲ್ಲಿ 4-0 ಅಂತರದ ಮುನ್ನಡೆ ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಅಂತಿಮ ಪಂದ್ಯ ಮಾತ್ರವೇ ಬಾಕಿಯಿದ್ದು ಈ ಪಂದ್ಯವನ್ನು ಕೂಡ ಆಸಿಸ್ ಪಡೆ ಗೆದ್ದುಕೊಂಡರೆ ವೈಟ್‌ವಾಶ್ ಮೂಲಕ ಸರಣಿಯನ್ನು ವಶಕ್ಕೆ ಪಡೆಯಲಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮುಕ್ತಾಯವಾದ ಬಳಿಕ ಲಂಕಾ ಪಡೆ ಭಾರತ ಪ್ರವಾಸ ಕೈಗೊಳ್ಳಲಿದ್ದು ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಬೆನ್ ಮೆಕ್‌ಡರ್ಮಾಟ್, ಆಶ್ಟನ್ ಅಗರ್, ಆರನ್ ಫಿಂಚ್ (ನಾಯಕ), ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಜ್ಯೆ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ
ಬೆಂಚ್: ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್), ದಾಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಜೆಫ್ರಿ ವಾಂಡರ್ಸೆ, ಮಹೇಶ್ ತೀಕ್ಷಣ, ಲಹಿರು ಕುಮಾರ
ಬೆಂಚ್: ನುವಾನ್ ತುಷಾರ, ಶಿರಾನ್ ಫೆರ್ನಾಂಡೋ, ಕಾಮಿಲ್ ಮಿಶ್ರಾ, ಜನಿತ್ ಲಿಯಾನಗೆ, ಪ್ರವೀಣ್ ಜಯವಿಕ್ರಮ, ಅವಿಷ್ಕ ಫೆರ್ನಾಂಡೋ, ರಮೇಶ್ ಮೆಂಡಿಸ್, ಬಿನೂರ ಫೆರ್ನಾಂಡೋ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications