ಬ್ಯಾಟಿಂಗ್‌ನಲ್ಲಿ ಹೊಸ ದಾಖಲೆ ಬರೆದ ಬೌಲರ್ ಜಸ್‌ಪ್ರೀತ್ ಬೂಮ್ರಾ!

ಸಿಡ್ನಿ: ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಬ್ಯಾಟಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ 'ಎ' ಮತ್ತು ಆಸ್ಟ್ರೇಲಿಯಾ 'ಎ' ನಡುವಿನ ಅಭ್ಯಾಸ ಪಂದ್ಯದಲ್ಲಿ ಬೂಮ್ರಾ ಹೆಸರಿನಲ್ಲಿ ವಿಶಿಷ್ಠ ದಾಖಲೆ ನಿರ್ಮಾಣವಾಗಿದೆ. ತನ್ನ ವೃತ್ತಿ ಬದುಕಿನಲ್ಲಿ ಬ್ಯಾಟಿಂಗ್ ಕಾರಣಕ್ಕಾಗಿ ಬೂಮ್ರಾ ಈ ಬಾರಿ ಗಮನ ಸೆಳೆದಿದ್ದಾರೆ. ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ವಿಶ್ವದ ಪ್ರಮುಖ ವೇಗಿಗಳಲ್ಲಿ ಜಸ್‌ಪ್ರೀತ್ ಬೂಮ್ರಾ ಮುಂಚೂಣಿ ಸ್ಥಾನದಲ್ಲಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಬೂಮ್ರಾ ಅಂಥ ರನ್ ಗಳಿಸಿರಲಿಲ್ಲ. ಆದರೆ ಶುಕ್ರವಾರ (ಡಿಸೆಂಬರ್ 11) ನಡೆದ ಪಂದ್ಯದಲ್ಲಿ ಬೂಮ್ರಾ ಅಚ್ಚರಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ವೇಗಿ ಬೂಮ್ರಾ ಅರ್ಧ ಶತಕ ಬಾರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂದ್ಹಾಗೆ ಈ ಪಂದ್ಯದಲ್ಲಿ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ.

ಕೈ ಕೊಟ್ಟ ಬ್ಯಾಟ್ಸ್‌ಮನ್‌ಗಳು
ಶುಕ್ರವಾರದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದಿಂದ ಬ್ಯಾಟ್ಸ್‌ಮನ್‌ಗಳು ನೀರಸ ಬ್ಯಾಟಿಂಗ್ ಪ್ರದರ್ಶಿಸಿದರು. ಬ್ಯಾಟ್ಸ್‌ಮನ್‌ಗಳಲ್ಲಿ ಪೃಥ್ವಿ ಶಾ 40, ಶುಬ್ಮನ್ ಗಿಲ್ 43, ಹನುಮ ವಿಹಾರಿ 15 ರನ್ ಬಾರಿಸಿದ್ದೇ ಹೆಚ್ಚು. ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಬರಲೇಯಿಲ್ಲ.

ಬೂಮ್ರಾ ಭರ್ಜರಿ ಬ್ಯಾಟಿಂಗ್
10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಜಸ್‌ಪ್ರೀತ್ ಬೂಮ್ರಾ ಚತುರ ಬ್ಯಾಟಿಂಗ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. 57 ಎಸೆತಗಳನ್ನು ಎದುರುಸಿದ ಬೂಮ್ರಾ 55 ರನ್ ಕೊಡುಗೆ ನೀಡಿದರು. ಇದು ಜಸ್‌ಪ್ರೀತ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಗಳಿಸಿದ ಅತ್ಯಧಿಕ ರನ್ ಆಗಿ ಗುರುತಿಸಿಕೊಂಡಿದೆ. ಅಲ್ಲದೆ ಬೂಮ್ರಾ ಬಾರಿಸಿದ ಚೊಚ್ಚಲ ಅರ್ಧ ಶತಕ ಕೂಡ ಇದಾಗಿದೆ. ಬೂಮ್ರಾ ಈ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸಿದ್ದ ಅತ್ಯಧಿಕ ರನ್ ಅಂದರೆ 10.

ಅಪರೂಪದ ಬ್ಯಾಟಿಂಗ್ ದಾಖಲೆ
ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳೆಸಿದ್ದ ಮಯಾಂಕ್ ಅಗರ್ವಾಲ್ 2, ನಾಯಕ ಅಜಿಂಕ್ಯ ರಹಾನೆ 4, ರಿಷಭ್ ಪಂತ್ 5, ವೃದ್ಧಿಮಾನ್ ಸಹಾ 0, ಹನುಮ ವಿಹಾರಿ 15 ಬಾರಿಸಿ ನಿರಾಸೆ ಮೂಡಿಸಿದ್ದರೆ, ಬೌಲರ್ ಬೂಮ್ರಾ ಅರ್ಧ ಶತಕ (55 ರನ್) ಬಾರಿಸಿ ಬೆರಗು ಮೂಡಿಸಿದರು. ಅಷ್ಟೇ ಅಲ್ಲ ಅಭ್ಯಾಸ ಪಂದ್ಯವೊಂದರಲ್ಲಿ ಆಟಗಾರ ಬಾರಿಸಿದ ಅತೀ ಹೆಚ್ಚು ರನ್ ಆಗಿ ಅದರಲ್ಲೂ ಬೌಲರ್ ಬಾರಿಸಿದ ಹೆಚ್ಚಿನ ರನ್ ಆಗಿ ಬೂಮ್ರಾ ಬಾರಿಸಿದ 55 ರನ್ ಗುರುತಿಸಿಕೊಂಡಿದೆ. ಬೂಮ್ರಾ ಈ ಇನ್ನಿಂಗ್ಸ್‌ನಲ್ಲಿ ಅಜೇಯ ಆಟ ನೀಡಿರುವುದೂ ಒಂದು ದಾಖಲೆಯೆ.

ಮೊದಲ ಇನ್ನಿಂಗ್ಸ್‌ನಲ್ಲಿ ಸ್ಕೋರ್
ಇದೇ ಪಂದ್ಯದಲ್ಲಿ ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್ ಕೂಡ 34 ಎಸೆತಗಳಲ್ಲಿ 22 ರನ್ ಬಾರಿಸಿದ್ದು ಗಮನ ಸೆಳೆದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 48.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 194 ರನ್ ಬಾರಿಸಿದೆ. ಭಾರತದ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಸೀನ್ ಅಬಾಟ್ 3, ಜ್ಯಾಕ್ ವೈಲ್ಡ್‌ಮತ್ 3, ಹ್ಯಾರಿ ಕಾನ್ವೇ, ವಿಲ್ ಸದರ್ಲ್ಯಾಂಡ್, ಕ್ಯಾಮರಾನ್ ಗ್ರೀನ್ ಮತ್ತು ಮಿಚೆಲ್ ಸ್ವೆಪ್ಸನ್ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು. ಭಾರತದ ಸ್ಕೋರ್ 194 (10 wkts, 48.3 Ov).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications