ಭಾರತ vs ಆಸ್ಟ್ರೇಲಿಯಾ: ಹನುಮ ವಿಹಾರಿ, ರಿಷಭ್ ಪಂತ್ ಆಕರ್ಷಕ ಶತಕ

ಸಿಡ್ನಿ: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಾದ ಹನುಮ ವಿಹಾರಿ ಮತ್ತು ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇಬ್ಬರೂ ಆಕರ್ಷಕ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಬೇಗನೆ ಔಟಾಗಿ ನಿರಾಸೆ ಅನುಭವಿಸಿದ್ದರು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರವಸೆಯ ಪ್ರದರ್ಶನ ನೀಡಿದ್ದಾರೆ.
ಭಾರತದ ಪ್ರಥಮ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ 40 ಮತ್ತು ಶುಬ್ಮನ್ ಗಿಲ್ 43 ರನ್ ಬಾರಿಸಿದ್ದು ಬಿಟ್ಟರೆ, ಇನ್ಯಾರೂ ಬ್ಯಾಟ್ಸ್‌ಮನ್‌ಗಳ ಕೊಡುಗೆ ಗಮನಾರ್ಹವಾಗಿರಲಿಲ್ಲ. ಆದರೆ ಬೌಲರ್ ಜಸ್‌ಪ್ರೀತ್ ಬೂಮ್ರಾ ಅರ್ಧ ಶತಕ ಬಾರಿಸಿ ಅಚ್ಚರಿ ಮೂಡಿಸಿದ್ದರು.
ಹನುಮ ವಿಹಾರಿ ಮತ್ತು ರಿಷಭ್ ಪಂತ್ ಆಟದ ನೆರವಿನಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿದೆ.

ರಿಷಭ್ ಪಂತ್ ಸ್ಫೋಟಕ ಶತಕ
ಶನಿವಾರ ದಿನದಾಟದ ಅಂತ್ಯಕ್ಕೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ 194 ಎಸೆತಗಳಲ್ಲಿ 104 ರನ್ ಬಾರಿಸಿ ಆಡುತ್ತಿದ್ದರೆ, ರಿಷಭ್ ಪಂತ್ 73 ಎಸೆತಗಳಲ್ಲಿ 103 ರನ್ ಬಾರಿಸಿ ಚಿತ್ತ ತನ್ನತ್ತ ಹರಿಸಿಕೊಂಡಿದ್ದರು. ಇನ್ನು ಮಯಾಂಕ್ ಅಗರ್ವಾಲ್ 61, ಶುಬ್ಮನ್ ಗಿಲ್ 65, ಅಜಿಂಕ್ಯ ರಹಾನೆ 38 ರನ್ ಕೊಡುಗೆ ನೀಡಿದ್ದರು.

ಭಾರತ ಮುನ್ನಡೆಯ ನಿರೀಕ್ಷೆ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 48.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 194 ರನ್ ಬಾರಿಸಿದ್ದರೆ, ಆಸ್ಟ್ರೇಲಿಯಾ ತಂಡ 32.2 ಓವರ್‌ಗೆ 10 ವಿಕೆಟ್ ಕಳೆದು 108 ರನ್ ಬಾರಿಸಿದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 90 ರನ್ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಶನಿವಾರ ದಿನದಾಟದ ಕೊನೆಗೆ ಭಾರತ 90 ಓವರ್‌ಗೆ 4 ವಿಕೆಟ್ ಕಳೆದು 386 ರನ್ ಗಳಿಸಿತ್ತು.

ಬೂಮ್ರಾ ಭರ್ಜರಿ ಬ್ಯಾಟಿಂಗ್
ಭಾರತದ ಆರಂಭಿಕ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಆಡದಿದ್ದಾಗ 10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ 57 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದ್ದರು. 11ನೇ ಕ್ರಮಾಂಕದ ಮೊಹಮ್ಮದ್ ಸಿರಾಜ್ ಕೂಡ 34 ಎಸೆತಗಳಲ್ಲಿ 22 ರನ್ ಬಾರಿಸಿ ಗಮನ ಸೆಳೆದಿದ್ದರು. ಅಂದ್ಹಾಗೆ ಬೂಮ್ರಾ ಈ ಇನ್ನಿಂಗ್ಸ್‌ನಲ್ಲಿ ಸಿಕ್ಸ್ ಚಚ್ಚಿ ಅರ್ಧ ಶತಕ ಪೂರೈಸಿದ್ದರು. 48.3ನೇ ಓವರ್‌ನಲ್ಲಿ ಸಿರಾಜ್ ಔಟಾಗಿದ್ದರಿಂದ ಬೂಮ್ರಾ ಬ್ಯಾಟಿಂಗ್ ಮನರಂಜನೆ ಕೊನೆಗೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications