ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ಪಂದ್ಯಗಳನ್ನು ಆಡುತ್ತಿದೆ. ಈಗಾಗಲೇ ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ, ಟೀಮ್ ಇಂಡಿಯಾ ಎರಡನೇ ಪಂದ್ಯದ ಮೇಲೆ ದೃಷ್ಟಿ ನೆಟ್ಟಿದೆ. ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಲಾಗುತ್ತಿದ್ದು, ಕುತೂಹಲ ಮನೆ ಮಾಡಿದೆ. ಎರಡನೇ ಟೆಸ್ಟ್‌ನಲ್ಲಿ ಆಸೀಸ್ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಈ ವೇಳೆ ಆತಿಥೇಯ ತಂಡ ಬಲಿಷ್ಠ ತಂಡವನ್ನು ಕಟ್ಟಿದೆ.
ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ 295 ರನ್‌ಗಳಿಂದ ಸೋತ ಬಳಿಕ ಆಸ್ಟ್ರೇಲಿಯಾ ಪುಟದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂತರವನ್ನು ಸಮನಾಗಿಸುವ ಲೆಕ್ಕಾಚಾರವನ್ನು ಆಸೀಸ್ ಹಾಕಿಕೊಂಡಿದೆ. ಶುಕ್ರವಾರ ನಡೆಯುವ ಪಂದ್ಯಕ್ಕೆ ಆಸ್ಟ್ರೇಲಿಯಾ ಗುರುವಾರ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ವೇಗಿ ಜೋಶ್ ಹ್ಯಾಜಲ್‌ವುಡ್ ಅನುಪಸ್ಥಿತಿ ಕಾಣುತ್ತಿದೆ. ಎರಡನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಸ್ಟೀವನ್ ಸ್ಮಿತ್ ಚೇತರಿಸಿಕೊಂಡಿದ್ದು ತಂಡ ಸೇರಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರ ಅನುಪಸ್ಥಿತಿ ಬಹುವಾಗಿ ಕಾಡಲಿದೆ. ಹ್ಯಾಜಲ್‌ವುಡ್ ಅವರು ಸಂಪೂರ್ಣವಾಗಿ ಫಿಟ್ ಆಗಿಲ್ಲದ್ದಿದ್ದರಿಂದ ಅಡಿಲೇಡ್ ಟೆಸ್ಟ್‌ಗೆ ಮೊದಲು ತಂಡದಿಂದ ಹೊರಗುಳಿದಿದ್ದಾರೆ. ಆತಿಥೇಯ ತಂಡ ಎರಡನೇ ಟೆಸ್ಟ್‌ಗೆ ಒಂದು ದಿನ ಮುನ್ನವೇ ತನ್ನ ತಂಡವನ್ನು ಪ್ರಕಟಿಸಿದೆ. ಜೋಶ್ ಹ್ಯಾಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಅವರನ್ನು ಆಡುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಒಂದು ಬದಲಾವಣೆ ಬಿಟ್ಟರೆ ಆಸೀಸ್ ತಂಡದಲ್ಲಿ ದೊಡ್ಡ ಬದಲಾವಣೆಗಳೇನು ಇಲ್ಲ.
ಸ್ಕಾಟ್ ಬೋಲ್ಯಾಂಡ್ 519 ದಿನಗಳ ನಂತರ ತಂಡ ಸೇರಲು ತಯಾರಾಗಿದ್ದಾರೆ. ಇದಕ್ಕೂ ಮೊದಲು ಇವರು 2023ರಲ್ಲಿ ಆಶಸ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇವರು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಎರಡು ಪಂದ್ಯ ಆಡಿದ ಅನುಭವ ಇದೆ. ಭಾರತದ ವಿರುದ್ಧ ಇವರು ಒಟ್ಟು 5 ವಿಕೆಟ್‌ಗಳನ್ನು 27.80ರ ಸರಾಸರಿಯಲ್ಲಿ ಪಡೆದಿದ್ದಾರೆ. ಇನ್ನು ಒಟ್ಟಾರೆ ಇವರು 20.34 ರ ಸರಾಸರಿಯಲ್ಲಿ 35 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಸ್ಟೀವನ್ ಸ್ಮಿತ್ ಎರಡನೇ ಟೆಸ್ಟ್‌ಗೂ ಮುನ್ನ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ ಸ್ಮಿತ್ ಡೇ-ಆಂಡ್ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಂದ್ಯವನ್ನು ಗೆಲ್ಲಲೇ ಬೇಕು ಎಂಬ ವಿಶ್ವಾಸದಲ್ಲಿ ಆಸೀಸ್ ಬಲಿಷ್ಠ ತಂಡವನ್ನು ಕಣಕ್ಕೆ ಇಳಿಸಲಿದೆ.
ಎರಡನೇ ಟೆಸ್ಟ್‌ಗೆ ಪ್ರಕಟಿತ ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಾಕ್), ಪ್ಯಾಟ್ ಕಮ್ಮಿನ್ಸ್ (ಸಿ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.