ಬುಧವಾರ, ಜನವರಿ 24ರಿಂದ ಐಸಿಸಿ ವೋಟಿಂಗ್ ಅಕಾಡೆಮಿ ಆಯ್ಕೆಗಳು ಮತ್ತು ಅಭಿಮಾನಿಗಳ ಮತದಾನದ ಆಧಾರದ ಮೇಲೆ ವರ್ಷದ ಅಸೋಸಿಯೇಟ್ ಪ್ಲೇಯರ್‌ನಿಂದ ಪ್ರಾರಂಭಿಸಿ 13 ವಿಭಿನ್ನ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿಗಳನ್ನು ಬಹಿರಂಗಪಡಿಸಲಾಗಿದೆ.
2023ರ ಐಸಿಸಿ ಪ್ರಶಸ್ತಿಯು ಒಟ್ಟು 13 ವಿಭಾಗಗಳನ್ನು ಒಳಗೊಂಡಿದೆ. ನಿರ್ದಿಷ್ಟ ಸ್ವರೂಪಗಳಲ್ಲಿ ಮಿಂಚಿರುವ ಕ್ರಿಕೆಟಿಗರನ್ನು ಗೌರವಿಸುವ ಪ್ರಶಸ್ತಿಗಳನ್ನು ನೀಡಿದರೆ, ಎಲ್ಲ ಸ್ವರೂಪಗಳಾದ್ಯಂತ ಒಟ್ಟಾರೆ ವಿಭಾಗಗಳಲ್ಲಿ ಮಿಂಚಿದ ಐಸಿಸಿ ಪುರುಷರ ವರ್ಷದ ಕ್ರಿಕೆಟಿಗನಿಗೆ ಅಸ್ಕರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ಮತ್ತು ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಿಗೆ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ ನೀಡಲಾಗುತ್ತದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರು 2023ರ ಐಸಿಸಿ ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟರು.
ಉಸ್ಮಾನ್ ಖವಾಜಾ ಅವರು ತಮ್ಮ ದೇಶದವರೇ ಆದ ಟ್ರಾವಿಸ್ ಹೆಡ್, ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡಿನ ಜೋ ರೂಟ್ ಅವರ ಕಠಿಣ ಸ್ಪರ್ಧೆಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.
ಎಡಗೈ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 1000 ರನ್ ಗಡಿ ದಾಟಿದ ಏಕೈಕ ಆಟಗಾರರಾಗಿದ್ದರು. ಅವರು ಆಡಿದ 13 ಪಂದ್ಯಗಳಲ್ಲಿ ಒಟ್ಟು 1,210 ರನ್ ಗಳಿಸುವ ಮೂಲಕ 2023ರ ವರ್ಷವನ್ನು ಅತ್ಯುತ್ತಮವಾಗಿ ಕೊನೆಗೊಳಿಸಿದರು.
2023ರ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉಸ್ಮಾನ್ ಖವಾಜಾ ತಮ್ಮ ಛಾಪು ಮೂಡಿಸಿದರು. ಎರಡೂ ತಂಡಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಸರಣಿಯನ್ನು ಮುಗಿಸಿದರು. ಸರಣಿಯ ನಾಲ್ಕು ಪಂದ್ಯಗಳಲ್ಲಿ 333 ರನ್ ಗಳಿಸಿದರು, ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಒಳಗೊಂಡಿವೆ.
ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲುವಿನ ಸಮಯದಲ್ಲಿ ಉಸ್ಮಾನ್ ಖವಾಜಾ ಬ್ಯಾಟಿಂಗ್‌ನಲ್ಲಿ ಪ್ರಾಬವ ಬೀರಲು ವಿಫಲರಾದರು. ಆದರೆ ನಂತರ, ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯಲ್ಲಿ ಪುಟಿದೆದ್ದರು. ಈ ಸರಣಿಯಲ್ಲಿ ತನ್ನ ಹೆಸರಿಗೆ 496 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಸರಣಿಯನ್ನು ಕೊನೆಗೊಳಿಸುವ ಮೂಲಕ ಮತ್ತೆ ಪುನರಾಗಮನ ಮಾಡಿದರು.
ಉಸ್ಮಾನ್ ಖವಾಜಾ ಪಾಕಿಸ್ತಾನದ ವಿರುದ್ಧ ಮೂರು ಬಾರಿ 40 ಪ್ಲಸ್ ಸ್ಕೋರ್‌ಗಳೊಂದಿಗೆ ವರ್ಷವನ್ನು ಉನ್ನತ ಮಟ್ಟದಲ್ಲಿ ಮುಗಿಸಿದರು. ಅಲ್ಲದೆ, ಉಸ್ಮಾನ್ ಖವಾಜಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 195 ರನ್ ಮತ್ತು ಭಾರತ ವಿರುದ್ಧ 180 ರನ್‌ಗಳ ಎರಡು ಬೃಹತ್ ಶತಕಗಳನ್ನು ಗಳಿಸಿದರು. ಇನ್ನು ಆಶಸ್ ಸರಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು.