ನಾಯಕ ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯದಲ್ಲಿ 68 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 44.4 ಓವರ್‌ಗಳಲ್ಲಿ 270 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 40.2 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟ್ ಆಗಿ ತವರಿನಲ್ಲಿ ಮತ್ತೊಂದು ಸೋಲು ಅನುಭವಿಸಿತು. ಈ ಮೂಲಕ ಆಸ್ಟ್ರೇಲಿಯಾ ಹೊಸ ದಾಖಲೆ ನಿರ್ಮಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಸತತ 14 ಪಂದ್ಯಗಳನ್ನು ಗೆದ್ದು ದಾಖಲೆಯನ್ನು ನಿರ್ಮಿಸಿದೆ. ಏರಡನೇ ಏಕದಿನ ಪಂದ್ಯದಲ್ಲಿ ಆಸೀಸ್ 14ನೇ ಗೆಲುವಿನ ನಗೆ ಬೀರಿತ್ತು. ತಂಡವು 16 ಅಕ್ಟೋಬರ್ 2023 ರಿಂದ 21 ಸೆಪ್ಟೆಂಬರ್ 2023 ರವರೆಗೆ ನಿರಂತರವಾಗಿ ಏಕದಿನ ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಆಸ್ಟ್ರೇಲಿಯಾ ಶ್ರೀಲಂಕಾ ತಂಡದ ದಾಖಲೆಯನ್ನು ಅಳಿಸಿ ಹಾಕಿದೆ. ಈ ಮೊದಲು ಶ್ರೀಲಂಕಾ ಏಕದಿನ ಕ್ರಿಕೆಟ್‌ನಲ್ಲಿ ಸತತ 13 ಪಂದ್ಯಗಳನ್ನು ಗೆದ್ದಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಸತತ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಐತಿಹಾಸಿಕ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸೀಸ್ ತಂಡವು 11 ಜನವರಿ 2003 ರಿಂದ 24 ಮೇ 2003 ರವರೆಗೆ ಸತತ 21 ODI ಪಂದ್ಯಗಳನ್ನು ಗೆದ್ದಿದೆ.
ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಿದ ಮ್ಯಾಥ್ಯೂ ಶಾರ್ಟ್ (29) ಹಾಗೂ ಟ್ರಾವಿಸ್ ಹೆಡ್ (29) ಜೋಡಿ 8.5 ಓವರ್‌ಗಳಲ್ಲಿ 46 ರನ್ ಸೇರಿಸಿತು. ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದ ಟ್ರಾವಿಸ್ ಹೆಡ್ ನಿರಾಸೆ ಅನುಭವಿಸಿದರು.
ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ ಭರ್ಜರಿ ಆಟವನ್ನು ಆಡಿದರು. ತಮ್ಮ ನೈಜ ಆಟವನ್ನು ಆಡಿದ ಮಿಚೆಲ್ 59 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 60 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ ಸಹ ತಂಡಕ್ಕೆ ಆಧಾರವಾದರು. ಇವರು 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿ ಔಟ್ ಆದರು.
ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸೆ 3, ಮ್ಯಾಥ್ಯೂ ಪಾಟ್ಸ್ ಹಾಗೂ ಆದೀಲ್ ರಶೀದ್ ತಲಾ ಎರಡು ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ದೊಡ್ಡ ಜೊತೆಯಾಟಗಳು ಬಾರದೆ ಇರುವುದು ತಂಡಕ್ಕೆ ಆಘಾತವನ್ನು ನೀಡಿತು. ಅಲ್ಲದೆ ತಂಡದ ಪರ ಯಾವೊಬ್ಬ ಬ್ಯಾಟರ್ ಸಹ ಅರ್ಧಶತಕ ಸಾಧನೆ ಮಾಡಲು ಆಗಲಿಲ್ಲ. ಬೆನ್ ಡಕೆಟ್ (32), ಜೆಮಿ ಸ್ಮಿತ್ (49), ಜಾಕೊಬ್ ಬೇತೆಲ್ (25), ಬ್ರೈಡನ್ ಕಾರ್ಸೆ (26), ಆದೀಲ್ ರಶೀದ್ (27) ಮಾತ್ರ, ಕೊಂಚ ಆಸೀಸ್ ಬೌಲರ್‌ಗಳನ್ನು ಕಾಡಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಜೋಶ್ ಹ್ಯಾಜಲ್‌ವುಡ್, ಗ್ಲೇನ್ ಮ್ಯಾಕ್ಸ್‌ವೆಲ್, ತಲಾ ಎರಡು ವಿಕೆಟ್ ಉರುಳಿಸಿದರು.