ಭಾನುವಾರ, ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡವು ಭರ್ಜರಿ ಗೆಲುವು ಸಾಧಿಸಿ ನೂತನ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ಅವರ ತವರಿನಲ್ಲೇ ಮಣಿಸಿದ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ1987, 1999, 2003, 2007, 2015ರ ನಂತರ ಇದೀಗ ಮತ್ತೊಮ್ಮೆ 2023ರ ಏಕದಿನ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಿತು.

ಇದೇ ವೇಳೆ 1983 ಮತ್ತು 2011ರ ನಂತರ ಮೂರನೇ ಏಕದಿನ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವ ಕನಸು ಕಂಡಿದ್ದ ಭಾರತ ತಂಡಕ್ಕೆ ಮತ್ತೊಮ್ಮೆ ನಿರಾಸೆ ಎದುರಾಯಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಎಡವಿತು.
12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ಕೋಟ್ಯಂತರ ಭಾರತೀಯರು ಕನಸು ನುಚ್ಚುನೂರಾಯಿತು. ಏಕದಿನ ವಿಶ್ವಕಪ್ ಗೆಲ್ಲಬೇಕಾದರೆ ಮತ್ತೆ ನಾಲ್ಕು ವರ್ಷ ಕಾಯಲೇಬೇಕಾಗಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಸರ್ವಪತನ ಕಂಡಿತು.

241 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು ಮತ್ತು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಲಿಲ್ಲ. ತಂಡದ ಮೊತ್ತ 16 ರನ್‌ಗಳಾಗಿದ್ದಾಗ, ವೈಯಕ್ತಿಕ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ವಿಕೆಟ್ ಒಪ್ಪಿಸಿದರು.

ನಂತರ ಬಂದ ಮಿಚೆಲ್ ಮಾರ್ಷ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 15 ರನ್ ಗಳಿಸಿದ್ದಾಗ ಔಟಾದರು. ಈ ವೇಳೆ ಕ್ರೀಸ್‌ಗೆ ಬಂದ ಸ್ಟೀವನ್ ಸ್ಮಿತ್ ಕೂಡ 4 ರನ್ ಗಳಿಸಿದ ಪೆವಿಲಿಯನ್ ಸೇರಿದರು.
ತಂಡದ ಮೊತ್ತ 47 ರನ್‌ಗಳಾಗಿದ್ದಾಗ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ರಕ್ಷಿಸಿದ್ದು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ. ಈ ಜೋಡಿ 4ನೇ ವಿಕೆಟ್‌ಗೆ 192 ರನ್‌ಗಳ ಅದ್ಭುತ ಜೊತೆಯಾಟದ ಮೂಲಕ ಭಾರತದಿಂದ ಗೆಲುವನ್ನು ಕಸಿದುಕೊಂಡರು.

ಆಸ್ಟ್ರೇಲಿಯಾ ತಂಡಕ್ಕೆ ಬೆನ್ನೆಲುಬಾಗಿ ನಿಂತ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 137 ರನ್ ಬಾರಿಸಿದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 110 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ ಅಜೇಯ 58 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 9 ಓವರ್‌ಗಳಲ್ಲಿ 43 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 7 ಓವರ್‌ಗಳಲ್ಲಿ 47 ರನ್ ನೀಡಿ 1 ವಿಕೆಟ್ ಕಬಳಿಸಿದರು ಮತ್ತು ಮೊಹಮ್ಮದ್ ಸಿರಾಜ್ 7 ಓವರ್‌ಗಳಲ್ಲಿ 45 ರನ್ ನೀಡಿ 1 ಕಿತ್ತರು.
ಇದಕ್ಕೂ ಮುನ್ನ ನಿಧಾನಗತಿಯ ಪಿಚ್‌ನಲ್ಲಿ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.
ಒಂದು ಕಡೆ ಆಕ್ರಮಣಕಾರಿ ಆಟ ನೀಡುತ್ತಿದ್ದ ರೋಹಿತ್ ಶರ್ಮಾ ವೇಗದ ರನ್‌ಗಳಿಗೆ ಮುಂದಾಗಿದ್ದರು. ಆದರೆ, 4 ರನ್ ಗಳಿಸಿದ್ದ ಶುಭ್ಮನ್ ಗಿಲ್ ಬೇಡದ ಶಾಟ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಜೊತೆಗೂಡಿ 46 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ದೊಡ್ಡ ಶಾಟ್‌ಗೆ ಮುಂದಾದ ರೋಹಿತ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 47 ರನ್ ಗಳಿಸಿದ್ದಾಗ ಔಟಾದರು.
ನಂತರ ಬಂದ ಶ್ರೇಯಸ್ ಅಯ್ಯರ್ ನಿರ್ಣಾಯಕ ಪಂದ್ಯದಲ್ಲಿ ವಿಕೆಟ್ ನೀಡಿದರು. ಕೇವಲ 4 ರನ್ ಗಳಿಸಿದ್ದಾಗ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಆಗ ಭಾರತ ತಂಡದ ಮೊತ್ತ 10.2 ಓವರ್‌ಗಳಲ್ಲಿ 81 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.
ಆಗ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕುಸಿದಿದ್ದ ತಂಡಕ್ಕೆ ನೆರವಾಗಲು ಪ್ರಯತ್ನಿಸಿದರು. ಈ ಜೋಡಿ 4ನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದರು. ಆಗ ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 54 ರನ್ ಗಳಿಸಿ ಬೌಲ್ಡ್ ಆದರು.
ಇನ್ನು ಫೈನಲ್‌ನಲ್ಲಿ ಔಟಾಗುವ ಮುನ್ನ ಕೆಎಲ್ ರಾಹುಲ್ 107 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 66 ರನ್ ಗಳಿಸಿದರು. ಉಳಿದಂತೆ ರವೀಂದ್ರ ಜಡೇಜಾ 9 ರನ್, ಸೂರ್ಯಕುಮಾರ್ ಯಾದವ್ 18 ರನ್, ಮೊಹಮ್ಮದ್ ಶಮಿ 6 ರನ್, ಜಸ್ಪ್ರೀತ್ ಬುಮ್ರಾ 1 ರನ್, ಕುಲದೀಪ್ ಯಾದವ್ 10 ರನ್ ಮತ್ತು ಮೊಹಮ್ಮದ್ ಸಿರಾಜ 9 ರನ್ ಗಳಿಸಿ ತಂಡದ ಮೊತ್ತ 240ರ ಗಡಿ ತಲುಪಲು ಸಹಾಯವಾದರು.
ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಮಿಚೆಲ್ ಸ್ಟಾರ್ಕ್ 10 ಓವರ್‌ಗಳಲ್ಲಿ 55 ರನ್ ನೀಡಿ 3 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 10 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಬಳಿಸಿದರು. ಜೋಶ್ ಹೇಜಲ್‌ವುಡ್ 10 ಓವರ್‌ಗಳಲ್ಲಿ 60 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಗ್ಲೆನ್ ಮ್ಯಾಕ್‌ವೆಲ್ ಮತ್ತು ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು.