ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ್ದು, ಅಬ್ಬರಿಸಿದೆ. ಶ್ರೀಲಂಕಾದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸೀಸ್ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಹೊಸ ದಾಖಲೆ ಬರೆದಿದೆ. ಈ ಸರಣಿಯ ಮೂಲಕ ಸ್ಟೀವ್ ಸ್ಮಿತ್ ತಮ್ಮಲ್ಲಿ ಇನ್ನು ನಾಯಕತ್ವದ ಗುಣಗಳು ಜೀವಂತವಾಗಿವೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಆಸ್ಟ್ರೇಲಿಯಾ ಈಗಾಗಲೇ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಸರಣಿ ಅಪೌಚಾರಿಕವಾಗಿತ್ತು. ಈ ಸರಣಿಗೆ ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದರು. ಆಗ ಸ್ಟೀವನ್ ಸ್ಮಿತ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ಇವರ ಮುಂದಾಳತ್ವದಲ್ಲಿ ಆಸ್ಟ್ರೇಲಿಯಾ ಅಮೋಘ ಪ್ರದರ್ಶನ ನೀಡಿದೆ. ಭಾನುವಾರ 9 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಎರಡನೇ ಟೆಸ್ಟ್‌ನಲ್ಲಿ ಮಣಿಸಿದ ಆಸ್ಟ್ರೇಲಿಯಾ, ಸರಣಿ ವಶಕ್ಕೆ ಮಾಡಿಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಇನಿಂಗ್ಸ್‌ನಲ್ಲಿ ಶ್ರೀಲಂಕಾ 257 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 414 ರನ್ ಸೇರಿಸಿತು. 157 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಲಂಕಾ 231 ರನ್ ಸೇರಿಸಿತು. ಭಾನುವಾರದ ಆಟ ಆರಂಭವಾದಾಗ ಲಂಕಾ 8 ವಿಕೆಟ್ ನಷ್ಟಕ್ಕೆ 211 ರನ್ ಗಳಿಂದ ಆಟ ಮುಂದುವರಿಸಿತ್ತು. ಆದರೆ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. 75 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಒಂದು ವಿಕೆಟ್ ಕಳೆದುಕೊಂಡು ನಿಗದಿತ ಗುರಿಯನ್ನು ಮುಟ್ಟಿ ಸಂಭ್ರಮಿಸಿತು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಭಾರತದ ದೊಡ್ಡ ದಾಖಲೆಯನ್ನು ಅಳಿಸಿ ಹಾಕಿತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು 2019-21 ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿತ್ತು. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್‌ನಲ್ಲಿ ಆಸೀಸ್ 13 ಗೆಲುವು ದಾಖಲಿಸಿ ಅಬ್ಬರಿಸಿತು.

ಈ ಬಾರಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಫೈಟ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಜೂನ್ 11 ರಂದು ಈ ಎರಡೂ ತಂಡಗಳು ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ. ಈಗಾಗಲೇ ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆಸೀಸ್, ಎರಡನೇ ಬಾರಿಗೆ ಪ್ರಶಸ್ತಿ ಎತ್ತುವ ಕನಸಿನಲ್ಲಿದೆ. ಇನ್ನು ದಕ್ಷಿಣ ಆಫ್ರಿಕಾ ಐಸಿಸಿ ಪ್ರಶಸ್ತಿ ಬರವನ್ನು ಕೊನೆಯಾಗಿಸುವ ನಿಟ್ಟಿನಲ್ಲಿ ಶ್ರಮಿಸಲಿದೆ.