ಸಿಡ್ನಿ: ಆಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಐದು ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-1 ರಿಂದ ಗೆದ್ದು ಬೀಗಿದೆ. ಐದನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟ್ರಾವಿಡ್ ಹೆಡ್ ಅವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿಯುದ್ದಕ್ಕೂ ಬಿಗುವಿನ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಕೊನೆಯ ದಿನದಾಟವನ್ನು 8 ವಿಕೆಟ್‌ಗೆ 302 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿದ ಇಂಗ್ಲೆಂಡ್, ಕೊನೆಯ ದಿನದಾಟದಲ್ಲಿ 40 ರನ್ ಸೇರಿಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಯುವ ಆಟಗಾರ ಜಾಕೊಬ್ ಬೆಥೆಲ್ 265 ಎಸೆತಗಳಲ್ಲಿ 15 ಬೌಂಡರಿ ನೆರವಿನಿಂದ 154 ರನ್ ಸಿಡಿಸಿ 9ನೇ ವಿಕೆಟ್ ರೂಪದಲ್ಲಿ ಔಟ್ ಆದರು. ಜೋಶ್ ಟಂಗ್ 6 ರನ್‌ಗಳಿಗೆ ಆಟ ಮುಗಿಸಿದರು. ಆಸ್ಟ್ರೇಲಿಯಾದ ಪರ ಮಿಚೆಲ್ ಸ್ಟಾರ್ಕ್ ಹಾಗೂ ಬ್ಯೂ ವೆಬ್‌ಸ್ಟಾರ್ ತಲಾ ಮೂರು ವಿಕೆಟ್ ಪಡೆದರು. ಅಂತಿಮವಾಗಿ ಇಂಗ್ಲೆಂಡ್ 88.2 ಓವರ್‌ಗಳಲ್ಲಿ 342 ರನ್‌ಗಳಿಗೆ ಆಲೌಟ್ ಆಯಿತು.

160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಜಾಕ್ ವೆದರ್‌ಫೋಲ್ಡ್ ಜೋಡಿ ಮೊದಲ ವಿಕೆಟ್‌ಗೆ 62 ರನ್‌ಗಳ ಕಾಣಿಕೆ ನೀಡಿತು. ಟ್ರಾವಿಸ್ ಹೆಡ್ ಈ ವೇಳೆ 29 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಇನ್ನೋಬ್ಬ ಆರಂಭಿಕ ಆಟಗಾರ ಜಾಕ್ ವೆದರ್‌ಫೋಲ್ಡ್ ಸಹ 5 ಬೌಂಡರಿ ನೆರವಿನಿಂದ 34 ರನ್ ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಬುಶೇನ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ನಾಯಕ ಸ್ಟೀವನ್ ಸ್ಮಿತ್ 12 ರನ್‌ಗಳಿಗೆ ಆಟ ಮುಗಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ (ಅಜೇಯ 16) ಹಾಗೂ ಕ್ಯಾಮರೂನ್ ಗ್ರೀನ್ (ಅಜೇಯ 22) ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಆಸ್ಟ್ರೇಲಿಯಾ 31.2 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್ ಕಲೆ ಹಾಕಿದೆ. ಇಂಗ್ಲೆಂಡ್ ಪರ ವೇಗಿ ಜೋಶ್ ಟಂಗ್ ಮೂರು ವಿಕೆಟ್ ಉರುಳಿಸಿದರು.