
ಸಿಡ್ನಿ: 2021ರ ಆರಂಭದಲ್ಲಿ ಏಕಕಾಲಕ್ಕೆ ಟೆಸ್ಟ್ ಸರಣಿ ಮತ್ತು ಟಿ20 ಸರಣಿ ನಡೆಸಲುದ್ದೇಶಿಸಿರುವುದಕ್ಕೆ ತಾನು ವಿರೋಧ ವ್ಯಕ್ತಪಡಿಸಿರುವುದಾಗಿ ಆಸ್ಟ್ರೆಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಈ ಬಗ್ಗೆ ತಾನು ತಿಳಿಸಿರುವುದಾಗಿ ಲ್ಯಾಂಗರ್ ಹೇಳಿಕೊಂಡಿದ್ದಾರೆ.
ಫೆಬ್ರವರಿ 22ರಿಂದ ಮಾರ್ಚ್ 7ರ ವರೆಗೆ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಆಡಲಿದೆ. ಇದೇ ಸಮಯಕ್ಕೆ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೊರಡುವುದರ ಬಗ್ಗೆ ಪ್ರಸ್ತಾವನೆಯಿದೆ. ಈ ಪ್ರಸ್ತಾವನೆಗೆ ಲ್ಯಾಂಗರ್ ವಿರೋಧ ವ್ಯಕ್ತಪಡಿಸಿದ್ದಾರೆ.
'ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷರಿಗೆ ಈ ವಿಚಾರ ಗೊತ್ತಿದೆ. ಸಿಇಒಗೂ ಈ ಸಂಗತಿ ಸ್ಪಷ್ಟವಾಗಿ ಗೊತ್ತಿದೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳೋದಾದ್ರೆ ನನಗಿದು ಖಂಡಿತಾ ಇಷ್ಟವಿಲ್ಲ,' ಎಂದು ಸ್ಥಳೀಯ ರೇಡಿಯೋ ಸ್ಟೇಶನ್ ಸೆನ್ ಜೊತೆ ಮಾತನಾಡಿದ ಲ್ಯಾಂಗರ್ ತಿಳಿಸಿದ್ದಾರೆ.
'ಒಂದೇ ಜಾಗದಲ್ಲಿ ಎರಡೆರಡು ಆಸ್ಟ್ರೇಲಿಯಾ ತಂಡಗಳನ್ನು ನೋಡಲು ನಾನು ಯಾವತ್ತಿಗೂ ಇಷ್ಟಪಡಲಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಒಂದೇ ದೇಶವಲ್ಲವೆ? ನಾವು ಎರಡು ರಾಷ್ಟ್ರಗಳು ಅಲ್ಲವಲ್ಲ? ಹಾಗೇನೆ ನಾವು ಒಂದೇ ಕ್ರೀಡಾಕೂಟ ಆಡಬಯಸುತ್ತೇವೆ,' ಎಂದು ಲ್ಯಾಂಗರ್ ಹೇಳಿದ್ದಾರೆ.