
ಫೆಬ್ರವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸವನ್ನು ಕೈಗೊಂಡು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಬಾರ್ಡರ್-ಗವಾಸ್ಕರ್ ಸರಣಿಯ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಸೆಣೆಸಾಟ ಕ್ರಿಕೆಟ್ ಅಭಿಮಾನಿಗಳ ಕಾತುರ ಹೆಚ್ಚಿಸಿದ್ದು ಭಾರತ ಪ್ರವಾಸ ಕೈಗೊಂಡು ಈ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವ ಬಗ್ಗೆ ಸ್ವತಃ ಆಸ್ಟ್ರೇಲಿಯಾದ ಕೆಲ ಆಟಗಾರರು ಕೂಡ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಮೆಕ್‌ಡೊನಾಲ್ಡ್ ಭಾರತ ಪ್ರವಾಸದಲ್ಲಿ ಕೂಡ ಆಸ್ಟ್ರೇಲಿಯಾ ತಂಡ ಯಾವುದೇ ಅಭ್ಯಾಸ ಪಂದ್ಯವನ್ನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡುವುದಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನು ಆಡದೆ ನೇರವಾದ ಅಧಿಕೃತ ಪಂದ್ಯದಲ್ಲಿಯೇ ಆಡುವ ತಮ್ಮ ನಿಲುವನ್ನು ಮುಂದುವರಿಸುವುದಾಗಿ ಆಸಿಸ್ ಹೆಡ್ ಕೋಚ್ ತಿಳಿಸಿದ್ದಾರೆ.
"ವಿದೇಶದಲ್ಲಿ ನಡೆಯುವ ಟೆಸ್ಟ್ ಸರಣಿಗಳಿಗೂ ಮುನ್ನ ಕಳೆದ ಹಲವು ಪ್ರವಾಸಗಳಲ್ಲಿ ನಾವು ಅಭ್ಯಾಸ ಪಂದ್ಯಗಳನ್ನು ಆಡಿಲ್ಲ. ಭಾರತ ಪ್ರವಾಸದಲ್ಲಿಯೂ ನಮಗೆ ಅಭ್ಯಾಸ ಪಂದ್ಯದ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಸರಣಿ ಆರಂಬವಾಗುವ ಒಂದು ವಾರ ಮುನ್ನ ನಾವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದೇವೆ. ಈ ಪ್ರವಾಸವನ್ನು ಹೆಚ್ಚು ದೀರ್ಘಗೊಳಿಸಲು ನಾವು ಬಯಸುವುದಿಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಕೋಚ್ ಮೆಕ್‌ಡೊನಾಲ್ಡ್.
ಇನ್ನು ಕಳೆದ ವರ್ಷ ಪಾಕಿಸ್ತಾನ ಪ್ರವಾಸದಲ್ಲಿಯೂ ಆಸ್ಟ್ರೇಲಿಯಾ ತಂಡ ಕೇವಲ ಒಂದು ವಾರ ಮುನ್ನ ಪ್ರವಾಸಕೈಗೊಂಡಿತ್ತು. ಮೆಲ್ಬರ್ನ್‌ನಲ್ಲಿಯೇ ಸಿದ್ದಪಡಿಸಿದ್ದ ವಿಶೇಷ ಪಿಚ್‌ಲ್ಲಿ ಆಸಿಸ್ ಆಟಗಾರರು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಬಹಳ ಮೊದಲೇ ಆಗಮಿಸಿ ಅಭ್ಯಾಸ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳುವ ನೆಪದಲ್ಲಿ ಒತ್ತಡ ಹೇರದೆ ಆಟಗಾರರ ಮಾನಸಿಕ ಹಾಗೂ ದೈಹಿಕ ಉಲ್ಲಾಸ ಹೆಚ್ಚಿಸಲು ನಾವು ಬಯಸುತ್ತಿದ್ದೇವೆ ಎಂದಿದ್ದಾರೆ ಆಸ್ಟ್ರೇಲಿಯಾದ ಹೆಡ್ ಕೋಚ್.
ಫೆಬ್ರವರಿ 9ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗುವ ಮೂಲಕ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಮೊದಲ ಪಂದ್ಯ ನಾಗ್ಪುರದಲ್ಲಿ 2ನೇ ಪಂದ್ಯ ದೆಹಲಿಯಲ್ಲಿ 3ನೇ ಪಂದ್ಯ ಧರ್ಮಶಾಲಾದಲ್ಲಿ ಹಾಗೂ 4ನೇ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.