
ಮೆಲ್ಬರ್ನ್: ಭಾರತ ಟೆಸ್ಟ್ ತಂಡದ ನಾಯಕ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 12ನೇ ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಗ್ರಾಂಡ್‌ನಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ರಹಾನೆ ತಂಡಕ್ಕೆ ಶತಕದ ಬೆಂಬಲ ನೀಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 30, ಮಾರ್ನಸ್ ಲ್ಯಬುಶೇನ್ 48, ಟ್ರಾವಿಸ್ ಹೆಡ್ 38, ಕ್ಯಾಮರಾನ್ ಗ್ರೀನ್ 12, ಟಿಮ್ ಪೈನ್ 13, ಪ್ಯಾಟ್ ಕಮಿನ್ಸ್ 9, ಮಿಚೆಲ್ ಸ್ಟಾರ್ಕ್ 7, ನೇಥನ್ ಲಿಯಾನ್ 20, ಜೋಶ್ ಹ್ಯಾಝಲ್ವುಡ್ 4 ರನ್‌ನೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್ ಬಾರಿಸಿತ್ತು.
ಭಾರತ vs ಆಸ್ಟ್ರೇಲಿಯಾ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, ಪಂದ್ಯ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿದೆ. ಭಾನುವಾರ ಎರಡನೇ ದಿನದಾಟದ ಅಂತ್ಯಕ್ಕೆ ರಹಾನೆ 200 ಎಸೆತಗಳಲ್ಲಿ 104 ರನ್ ಗಳಿಸಿ ಆಡುತ್ತಿದ್ದರು. ಭಾರತ ತಂಡ 5 ವಿಕೆಟ್ ನಷ್ಟಕ್ಕೆ 277 ರನ್ ಬಾರಿಸಿತ್ತು. ಮಯಾಂಕ್ ಅಗರ್ವಾಲ್ (0), ಶುಬ್ಮನ್ ಗಿಲ್ (45), ಚೇತೇಶ್ವರ್ ಪೂಜಾರ (17), ಹನುಮ ವಿಹಾರಿ (21), ರಿಷಭ್ ಪಂತ್ (29) ವಿಕೆಟ್ ಒಪ್ಪಿಸಿದ್ದರು.
ಒಟ್ಟು 66 ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ, 42.45ರ ಸರಾಸರಿಯಂತೆ 4245 ರನ್ ಬಾರಿಸಿದ್ದಾರೆ. 12 ಶತಕ, 22 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 90 ಏಕದಿನ ಪಂದ್ಯಗಳಲ್ಲಿ 2962 ರನ್, 20 ಟಿ20ಐ ಪಂದ್ಯಗಳಲ್ಲಿ 375 ರನ್, 149 ಐಪಿಎಲ್ ಪಂದ್ಯಗಳಲ್ಲಿ 3933 ರನ್ ಬಾರಿಸಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ರಹಾನೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದರು.