
ಸಿಡ್ನಿ: ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 77 ರನ್ ಬಾರಿಸುವ ಮೂಲಕ ಪೂಜಾರ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ 205 ಎಸೆತಗಳಿಗೆ 77 ರನ್ ಬಾರಿಸಿದರು. ಈ ಮೊದಲು 5903 ರನ್ ಬಾರಿಸಿದ್ದ ಪೂಜಾರ ಅವರ ಮೊದಲ ಇನ್ನಿಂಗ್ಸ್‌ನ 50 ರನ್ ಸೇರಿಸಿದರೆ ಒಟ್ಟಿಗೆ 6,030 ರನ್ ಆಗುತ್ತದೆ. 80 ಟೆಸ್ಟ್ ಪಂದ್ಯಗಳಲ್ಲಿ ಪೂಜಾರ 6000 ರನ್ ಪೂರೈಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, 338+312 ರನ್ ಬಾರಿಸಿತ್ತು. ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 244 ರನ್ ಬಾರಿಸಿ 94 ರನ್ ಹಿನ್ನಡೆ ಅನುಭವಿಸಿತ್ತು. ಭಾರತ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ. 96 ಓವರ್ ಮುಕ್ತಾಯಕ್ಕೆ ಭಾರತ 5 ವಿಕೆಟ್ ಕಳೆದು 280 ರನ್ ಬಾರಿಸಿತ್ತು. ಗೆಲುವಿಗೆ 127 ರನ್‌ಗಳ ಅಗತ್ಯವಿತ್ತು.
32ರ ಹರೆಯದ ಪೂಜಾರ 5 ಏಕದಿನ ಪಂದ್ಯಗಳಲ್ಲಿ 51 ರನ್, 206 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 15888 ರನ್, 103 ಲಿಸ್ಟ್ ಎ ಪಂದ್ಯಗಳಲ್ಲಿ 4445 ರನ್, 64 ಟಿ20 ಪಂದ್ಯಗಳಲ್ಲಿ 1356 ರನ್ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ 18 ಶತಕ, 25 ಅರ್ಧ ಶತಕಗಳನ್ನು ಬಾರಿಸಿದ್ದಾರೆ.