ಇಂಗ್ಲೆಂಡ್ ವಿರುದ್ಧ ರಿಷಭ್ ಪಂತ್ ಶುರುಮಾಡಲಿದ್ದಾರೆ: ವಿರಾಟ್ ಕೊಹ್ಲಿ

ಚೆನ್ನೈ: ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಗೆಲುವು ದಾಖಲಿಸುವಲ್ಲಿ ಯುವ ಆಟಗಾರ ರಿಷಭ್ ಪಂತ್ ಪಾತ್ರ ಪರಿಣಾಮಕಾರಿಯಾಗಿತ್ತು. ಹೀಗಾಗಿ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಅವರಿಗಿಂತ ಆಕ್ರಮಣಕಾರಿ ಆಟವಾಡುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಮೊದಲ ಆದ್ಯತೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಫೆಬ್ರವರಿ 5ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಿಕ ಎರಡು ಪಂದ್ಯಗಳು ನಡೆಯಲಿವೆ. ಈ ಟೆಸ್ಟ್ ಸರಣಿಯ ಸೋಲು-ಗೆಲುವು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಪರಿಣಾಮ ಬೀರಲಿದೆ.
ಯಾಕೆಂದರೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಫಲಿತಾಂಶ ಮುಂಬರಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.

ಪಂತ್ ಶುರುಮಾಡಲಿದ್ದಾರೆ
'ಮೊದಲ ಟೆಸ್ಟ್‌ನಲ್ಲಿ ರಿಷಭ್ ಪಂತ್ ಶುರುಮಾಡಲಿದ್ದಾರೆ. ಅವರು ಯಾವಾಗಲೂ ಮಾನಸಿಕವಾಗಿ ಫ್ರೀಯಾಗಿರುತ್ತಾರೆ. ಚೆನ್ನಾಗಿ ಆಡುತ್ತಾರೆ. ಆಟದ ಎಲ್ಲಾ ಆಯಾಮಗಳಲ್ಲೂ ಪಂತ್ ಪರಿಶ್ರಮ ಪಡುತ್ತಾರೆ,' ಎಂದು ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಗುರುವಾರ (ಫೆಬ್ರವರಿ 4) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕೊಹ್ಲಿ ಹೇಳಿದ್ದಾರೆ.

ಸಹಾ ಯಾಕೆ ಕಡೆಗಣನೆ?
ಹಿಂದಿನ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ವೃದ್ಧಿಮಾನ್ ಸಾಹಾ ಅವರಿಗಿಂತ ರಿಷಭ್ ಪಂತ್ ಹೆಚ್ಚು ಗಮನ ಸೆಳೆದಿದ್ದರು. ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿಯೇ ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಪಂತ್‌ಗೆ ಆದ್ಯತೆ ನೀಡುತ್ತೇನೆ. ಪಂತ್ ಗಾಯಕ್ಕೀಡಾಗಿ ತಂಡದಿಂದ ಹೊರಬೀಳುವಂತಾದರೆ ಸಾಹಾ ಅವರಿಗೆ ಅವಕಾಶ ನೀಡುತ್ತೇವೆ ಎಂಬರ್ಥದಲ್ಲಿ ಕೊಹ್ಲಿ ಮಾತನಾಡಿದ್ದಾರೆ.

ಪಂತ್ ಮೇಲೆ ನಂಬಿಕೆಗೆ ಕಾರಣ
'ಪಂತ್ ಅವರಲ್ಲಿ ಹೆಚ್ಚಿನ ಭರವಸೆಯಿಡಲು ಕಾರಣವಿದೆ. ಆಸ್ಟ್ರೇಲಿಯಾದಲ್ಲಿ ಪಂತ್ ಆಡಿದ ರೀತಿ ಅವರ ಮೇಲೆ ನಾವು ಹೆಚ್ಚು ನಂಬಿಕೆಯಿಡುವಂತೆ ಮಾಡಿದೆ,' ಎಂದು ಕೊಹ್ಲಿ ವಿವರಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಸಹಾ ಹೆಚ್ಚು ವೈಫಲ್ಯ ತೋರಿಕೊಂಡಿದ್ದರು. ಆದರೆ ಪಂತ್ 5 ಇನ್ನಿಂಗ್ಸ್‌ಗಳಲ್ಲಿ 274 ರನ್ ಬಾರಿಸಿದ್ದರು. ಕೊನೇ ಪಂದ್ಯದಲ್ಲಿ ಪಂತ್ ಅಜೇಯ 89 ರನ್ ಬಾರಿಸಿ ಡ್ರಾ ಆಗಲಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಆ ಪಂದ್ಯದ ಫಲಿತಾಂಶದೊಂದಿಗೆ ಸರಣಿಯೂ ಭಾರತದ ವಶವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications