ಆಸ್ಟ್ರೇಲಿಯಾ ವಿರುದ್ಧ ಭಾರತದ ಅಭ್ಯಾಸ ಪಂದ್ಯಕ್ಕೆ ಕ್ಷಣಗಣನೆ: ಎಲ್ಲಿ? ಯಾವಾಗ? ವೀಕ್ಷಿಸುವುದು ಹೇಗೆ?

ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು ಪ್ರಮುಖ ಘಟ್ಟದ ಆರಂಭಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಬಾಕಿಯಿದೆ. ಇದಕ್ಕೂ ಮುನ್ನ ಅಭ್ಯಾಸ ಪಂದ್ಯವನ್ನು ನೊಗದಿಗೊಳಿಸಲಾಗಿದ್ದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಅಭ್ಯಾಸ ಪಂದ್ಯವನ್ನಾಡಲು ಸಜ್ಜಾಗಿದೆ. ಭಾರತ ತಂಡ ಸೌತ್ ಆಸ್ಟ್ರೇಲುಯಾ ವಿರುದ್ಧ ಎರಡು ಅನಧಿಕೃತ ಅಭ್ಯಾಸ ಪಂದ್ಯಗಳನ್ನು ಆಡಿದೆ. ಇದೀಗ ಐಸಿಸಿ ನಿಗದಿಪಡಿಸಿರುವಂತೆ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ.
ಆಸ್ಟ್ರೇಲಿಯಾ ತಂಡ ವಿಶ್ವಕಪ್‌ನ ಆರಂಭಕ್ಕೂ ಮುನ್ನವೇ ಹಿನ್ನಡೆಯೊಂದಿಗೆ ಕಣಕ್ಕಿಳಿಯುತ್ತಿದೆ. ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ವೆಸ್ಟ್ ಇಂಡೀಸ್ ತಂಡದ ವಿರುದ್ಧ ತವರಿನಲ್ಲಿ ಸರಣಿ ಗೆಲುವು ಸಾಧಿಸಿತಾದರೂ ಇಂಗ್ಲೆಂಡ್ ವಿರುದ್ಧದ ಚುಟುಕು ಮಾದರಿಯ ಸರಣಿಯಲ್ಲಿ 0-2 ಅಂತರದಿಂದ ಸೋಲು ಅನುಭವಿಸುವ ಮೂಲಕ ಭಾರೀ ಹಿನ್ನಡೆ ಅನುಭವಿಸಿತ್ತು. ಇತ್ತ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಚುಟುಕು ಮಾದರಿಯಲ್ಲಿ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.

ಪಂದ್ಯದ ದಿನಾಂಕ, ಸಮಯ ಹಾಗೂ ನೇರಪ್ರಸಾರ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಐಸಿಸಿ ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯವನ್ನು ಆಡಲಿದ್ದು ಈ ಪಂದ್ಯ ಅಕ್ಟೋಬರ್ 17 ಸೋಮವಾರದಂದು ನಡೆಯಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 9:30ಕ್ಕೆ ಈ ಪಂದ್ಯ ಆರಂಭಗೊಳ್ಳಲಿದ್ದು ಬ್ರಿಸ್ಬೇನ್‌ನ ಗಾಬಾ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಸ್ಟಾರ್‌ಸ್ಪೊರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯದ ನೇರಪ್ರಸಾರವಿರಲಿದ್ದು ಹಾಟ್‌ಸ್ಟಾರ್‌ಲ್ಲಿ ಪಂದ್ಯವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್
ಪಿಚ್ ರಿಪೋರ್ಟ್: ಗಾಬಾ ಸ್ಟೇಡಿಯಮ್‌ನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಆದರೆ ವೇಗದ ಬೌಲರ್‌ಗಳಿಗೆ ಕುಡ ಇಲ್ಲಿನ ಪಿಚ್ ಅನುಕೂಲ ಒದಗಿಸುವ ಕಾರಣ ಬ್ಯಾಟರ್‌ಗಳಿಗೆ ಸವಾಲಾಗುವ ಸಾಧ್ಯತೆಯೂ ಇದೆ. ಟಾಸ್ ಗೆದ್ದ ತಂಡ ಫಿಲ್ಡಿಂಗ್ ಆಯ್ದುಕೊಳ್ಳುವುದು ಉತ್ತಮ ನಿರ್ಧಾರವಾಗಲಿದೆ.
ಹವಾಮಾನ ವರದಿ: ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಆರಂಭಕ್ಕೂ ಮುನ್ನವೇ ಮಳೆಯಾಗುವ ಸಾಧ್ಯತೆಯಿರುವ ಕಾರಣ ಪಂದ್ಯದಲ್ಲಿ ಓವರ್‌ಗಳ ಕಡಿತವಾದರೂ ಅಚ್ಚರಿಯಿಲ್ಲ.

ಸ್ಕ್ವಾಡ್‌ಗಳು ಹೀಗಿದೆ
ಆಸ್ಟ್ರೇಲಿಯಾ: ಆರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಝಂಪಾ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications