ಏಕದಿನ ಬಳಿಕ ಟೆಸ್ಟ್ ಸರಣಿ ಮೇಲೆ ಲಂಕಾ ಕಣ್ಣು: ಆಸಿಸ್ ವಿರುದ್ಧದ ಸರಣಿಗೆ 18 ಸದಸ್ಯರ ತಂಡ ಪ್ರಕಟ

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದ್ದು ಇದೀಗ ಎರಡೂ ತಂಡಗಳ ಚಿತ್ತ ಟೆಸ್ಟ್ ಸರಣಿಯ ಮೇಲಿದೆ. ಮೂರು ಟಿ20 ಹಾಗೂ ಐದು ಏಕದಿನ ಪಂದ್ಯಗಳ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಲಿದ್ದು ಅದಕ್ಕಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರನ್ನು ಹೆಸರಿಸಿದೆ.
ಜೂನ್ 29ರಿಂದ ಗಾಲೆ ಕ್ರೀಡಾಂಗಣದಲ್ಲಿ ಟೆಸ್ಟ್ ಸರಣಿ ನಡೆಯಲಿದ್ದು ಈ ಸರಣಿಗೆ ಶ್ರೀಲಂಕಾ ತಂಡವನ್ನು ದಿಮುತ್ ಕರುಣರತ್ನೆ ಮುನ್ನಡೆಸಲಿದ್ದಾರೆ. ಇನ್ನು ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ ಪಾತುಮ್ ನಿಸ್ಸಾಂಕ ಈ ಟೆಸ್ಟ್ ಸರಣಿಯಲ್ಲಿಯೂ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಬಲಿಷ್ಠವಾಗಿದೆ ಬ್ಯಾಟಿಂಗ್ ವಿಭಾಗ
ಕುಸಾಲ್ ಮೆಂಡಿಸ್, ಒಶಾಡಾ ಫೆರ್ನಾಂಡೋ, ಧನಂಜಯ ಡಿ ಸಿಲ್ವ ಮತ್ತು ಎಂಜಲೋ ಮ್ಯಾಥ್ಯೂಸ್ ಲಂಕಾದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ. ನಿರೋಶನ್ ಡಿಕ್ವೆಲ್ಲಾ ಮತ್ತು ದಿನೇಶ್ ಚಾಂಡಿಮಾಲ್ ಸರಣಿಯಲ್ಲಿ ಶ್ರೀಲಂಕಾದ ಎರಡು ವಿಕೆಟ್ ಕೀಪಿಂಗ್ ಆಯ್ಕೆಗಳಾಗಿ ತಂಡದಲ್ಲಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಚಾಮಿಕಾ ಕರುಣಾರತ್ನೆ ಮತ್ತು ಎಡಗೈ ಸೀಮರ್ ವಿಶ್ವ ಫೆರ್ನಾಂಡೋ ಇದ್ದು ದುಷ್ಮಂತ ಚಮೀರ ಮತ್ತು ಲಹಿರು ಕುಮಾರ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಸ್ಪಿನ್ನರ್‌ಗಳಿಗೆ ಆದ್ಯತೆ
ಶ್ರೀಲಂಕಾ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಈ ತಂಡದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಲಸಿತ್ ಎಂಬುಲ್ದೇನಿಯಾ ಮತ್ತು ಪ್ರವೀಣ್ ಜಯವಿಕ್ರಮ ಅವರಂತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅನ್ ಕ್ಯಾಪ್ಡ್ ಯುವ ಆಟಗಾರ ಜೆಫ್ರಿ ವಾಂಡರ್ಸೆ ಕೂಡ ಟೆಸ್ಟ್ ತಂಡದ ಭಾಗವಾಗಿ ಮುಂದುವರಿದಿದ್ದಾರೆ. ಸ್ಪಿನ್ನರ್‌ಗಳು ಹೆಚ್ಚಿನ ಬೌಲರ್‌ಗಳ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಏಕದಿನ ಸರಣಿ ಗೆದ್ದ ಶ್ರೀಲಂಕಾ
ಇನ್ನು ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಪ್ರವಾಸಿ ಆಸಿಸ್ ಪಡೆ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದುಕೊಂಡಿದೆ. ಈ ಮೂಲಕ ಶ್ರೀಲಂಕಾ ತವರಿನಲ್ಲಿ ಬರೊಬ್ಬರಿ ಮೂರು ದಶಕಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದುಕೊಂಡಂತಾಗಿದೆ.

ಶ್ರೀಲಂಕಾ ಪಡೆ ಹೀಗಿದೆ
ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಓಷಾದ ಫೆರ್ನಾಂಡೋ, ಏಂಜೆಲೊ ಮ್ಯಾಥ್ಯೂಸ್, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಚಾಮಿಕಾ ಕರುಣಾರತ್ನೆ, ಕಸುನ್ ರಜಿತ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ, ದಿಲ್ಶಾನ್ ಮಧುಶಂಕ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ, ಜೆಫ್ರಿ ವಾಂಡರ್ಸೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications