ಈ ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಪ್ರತಿಷ್ಠಿತ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಟೂರ್ನಿಯಲ್ಲಿ ಯಾವ ತಂಡಗಳು ಫೈನಲ್ ಪ್ರವೇಶಿಸಲಿವೆ ಹಾಗೂ ಈ ಬಾರಿ ಬಲಿಷ್ಠವಾಗಿರುವ 3 ತಂಡಗಳು ಯಾವುವು ಎಂಬುದನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲಿಸಿದ ಯಶಸ್ವಿ ನಾಯಕ ರಿಕಿ ಪಾಂಟಿಂಗ್ ಊಹಿಸಿದ್ದಾರೆ.
ಇನ್ನು ಕಳೆದ ವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ತಂಡವನ್ನು ಸೋಲಿಸಿದ ನೆದರ್ಲೆಂಡ್ ಹಾಗೂ ಪಪುವಾ ನ್ಯೂ ಗಿನಿಯಾ ತಂಡವನ್ನು ಸದೆಬಡಿದ ಜಿಂಬಾಬ್ವೆ ತಂಡಗಳು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆಡಲು ಅರ್ಹತೆಯನ್ನು ಗಿಟ್ಟಿಸಿಕೊಂಡಿವೆ. ಈ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ 16 ತಂಡಗಳು ಖಚಿತವಾಗಿದ್ದು, ಟೂರ್ನಿಗೆ ದಿನಗಣನೆ ಆರಂಭವಾಗಿದೆ.
ಟೂರ್ನಿ ಅಕ್ಟೋಬರ್ 16ರಂದು ನಡೆಯಲಿರುವ ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳ ನಡುವಿನ ಗ್ರೂಪ್ ಹಂತದ ಪ್ರಥಮ ಪಂದ್ಯದ ಮೂಲಕ ಆರಂಭವಾಗಲಿದ್ದು, ಅಕ್ಟೋಬರ್ 22ರಂದು ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದ ಮೂಲಕ ಸೂಪರ್ 12 ಹಂತದ ಹಣಾಹಣಿಗಳು ಶುರುವಾಗಲಿವೆ. ಇನ್ನು ಟೀಮ್ ಇಂಡಿಯಾದ ಪ್ರಥಮ ಪಂದ್ಯ ಅಕ್ಟೋಬರ್ 23ರ ಭಾನುವಾರದಂದು ನಡೆಯಲಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದಿದ್ದ ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮುವತ್ತ ಚಿತ್ತ ನೆಟ್ಟಿದೆ. ಹೀಗಿರುವಾಗ ರಿಕಿ ಪಾಂಟಿಂಗ್ ಟೀಮ್ ಇಂಡಿಯಾವನ್ನು ಫೈನಲ್ ಪಂದ್ಯದಲ್ಲಿ ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

ಈ ತಂಡ ಟೀಮ್ ಇಂಡಿಯಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಲಿದೆ
"ನನ್ನ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯಲಿವೆ. ಹಾಗೂ ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಭಾರತ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ತವರು ನೆಲದ ಅನುಕೂಲ ಆಸ್ಟ್ರೇಲಿಯಾ ತಂಡಕ್ಕೆ ಇರಲಿದೆ" ಎಂದು ರಿಕಿ ಪಾಂಟಿಂಗ್ ಹೇಳಿಕೆ ನೀಡಿದ್ದಾರೆ.

ಈ 3 ತಂಡಗಳು ಟೂರ್ನಿಯಲ್ಲಿ ಅಬ್ಬರಿಸಲಿವೆ
ಇನ್ನೂ ಮುಂದುವರಿದು ಮಾತನಾಡಿದ ರಿಕಿ ಪಾಂಟಿಂಗ್ ಇಂಗ್ಲೆಂಡ್ ಸೀಮಿತ ಓವರ್‌ಗಳಲ್ಲಿ ಸಾಕಷ್ಟು ಬಲಿಷ್ಠ ತಂಡವಾಗಿದ್ದು, ಉತ್ತಮ ಆಟಗಾರರಿಂದ ಕೂಡಿದೆ, ಹೀಗಾಗಿ ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾಗಿ ಮಿಂಚಲಿದ್ದು ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಲಿವೆ ಎಂದು ಹೇಳಿಕೆ ನೀಡಿದ್ದಾರೆ.

ಗ್ರೂಪ್ 2ರಲ್ಲಿ ಭಾರತ
ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಎರಡನೇ ಗುಂಪಿನಲ್ಲಿ ಟೀಮ್ ಇಂಡಿಯಾ ಇದೆ. ಟೀಮ್ ಇಂಡಿಯಾ ಜತೆ ಸಾಂಪ್ರದಾಯಕ ಎದುರಾಳಿಯಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಗುಂಪಿನಲ್ಲಿವೆ.

ಭಾರತ ಆಸ್ಟ್ರೇಲಿಯಾ ಟಿ ಟ್ವೆಂಟಿ ಮುಖಾಮುಖಿ
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 23 ಟಿ ಟ್ವೆಂಟಿ ಮುಖಾಮುಖಿಯ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಆಸ್ಟ್ರೇಲಿಯಾ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಇತ್ತಂಡಗಳ ನಡುವಿನ ಉಳಿದೊಂದು ಟಿ ಟ್ವೆಂಟಿ ಮುಖಾಮುಖಿ ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಈ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿಯವರೆಗೂ ನಡೆದಿರುವ ಒಟ್ಟಾರೆ ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications