
ಕೆಲ ತಿಂಗಳ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಕ್ರಿಕೆಟ್ ವಲಯದಲ್ಲಿ ಏಕದಿನ ಕ್ರಿಕೆಟ್ ಮಾದರಿಯ ಪ್ರಸ್ತುತತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾದವು. ಪ್ರಸ್ತುತ ಕಾಲದಲ್ಲಿ ಏಕದಿನ ಕ್ರಿಕೆಟ್ ಮಾದರಿ ಅಪ್ರಸ್ತುತ ಎಂಬ ಅಭಿಪ್ರಾಯಗಳು ಸಾಕಷ್ಟು ಮಾಜಿ ಹಾಗೂ ಹಾಲಿ ಕ್ರಿಕೆಟಿಗರಿಂದ ವ್ಯಕ್ತವಾಗಿತ್ತು. ಅದರಲ್ಲಿ ಪ್ರಮುಖವಾಗಿ ಆಸ್ಟ್ರೇಲಿಯಾದ ಆಟಗಾರ ಉಸ್ಮಾನ್ ಖವಾಜ ಕೂಡ ಒಬ್ಬರು. ಏಕದಿನ ಕ್ರಿಕೆಟ್ ನಿಧಾನಕ್ಕೆ ಸಾಯುತ್ತಿದೆ ಎಂದು ಖವಾಜ ಅಭಿಪ್ರಾಯ ಪಟ್ಟಿದ್ದರು. ಅಲ್ಲದೆ ಏಕದಿನ ಮಾದರಿಯಲ್ಲಿ ನಾನು ಹೆಚ್ಚು ಕಾಲ ಮುಂದುವರಿಯುವುದಿಲ್ಲ ಎಂದಿದ್ದರು ಖವಾಜ.
ಇದೀಗ ಏಕದಿನ ಮಾದರಿಯ ಬಗ್ಗೆ ಮತ್ತೊಮ್ಮೆ ಉಸ್ಮಾನ್ ಖವಾಜ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಏಕದಿನ ಮಾದರಿಯ ರೋಚಕತೆ ಹೆಚ್ಚಿಸಲು ಐವತ್ತು ಓವರ್‌ಗಳ ಪಂದ್ಯದ ಬಲದಾಗಿ 40 ಓವರ್‌ಗಳ ಪಂದ್ಯವನ್ನು ಆಯೋಜಿಸುವುದು ಸೂಕ್ತ ಎಂದಿದ್ದಾರೆ. ಈ ಮೂಲಕ ಹೆಚ್ಚು ಪ್ರಸ್ತುತ ಹಾಗೂ ಕುತೂಹಲಕಾರಿಯಾದ ಮಾದರಿಯಾಗಿ ಏಕದಿನ ಕ್ರಿಕೆಟ್‌ಅನ್ನು ಉಳಿಸಿಕೊಳ್ಳಬಹುದು ಎಂದಿದ್ದಾರೆ ಉಸ್ಮಾನ್ ಖವಾಜ.
ಈಗ 50 ಓವರ್‌ಗಳ ಪಂದ್ಯ ಎಂಬುದು ಸುದೀರ್ಘ ಎನಿಸುತ್ತದೆ ಎಂದಿರುವ ಖವಾಜ 40 ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯನ್ನು ನಾನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ 40 ಲೀಗ್‌ನಲ್ಲಿ ಆನಂದಿಸಿದ್ದೇನೆ ಎಂದಿದ್ದಾರೆ. ಓವರ್‌ಗಳನ್ನು ಕಡಿತಗೊಳಿಸುವುದು ಈ ಮಾದರಿಯನ್ನು ಕುತೂಹಲಕಾರಿಯಾಗಿಸಲು ಇರುವ ಸೂಕ್ತ ದಾರಿಯಾಗಿದೆ ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಡಂ ಜಂಪಾ ಕೂಡ ಉಸ್ಮಾನ್ ಖವಾಜ ಅಭಿಪ್ರಾಯಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಏಕದಿನ ಮಾದರಿಯನ್ನು ಚುಟುಕುಗೊಳಿಸುವುದು ಅಥವಾ ಬೇರೇನಾದರೂ ಕುತೂಹಲಕಾರಿ ಅಂಶಗಳನ್ನು ಸೇರ್ಪಡೆಗೊಳಿಸುವ ಮೂಲಕ ಈ ಮಾದರಿಯನ್ನು ಹೆಚ್ಚು ಕುತೂಹಲಕಾರಿಯನ್ನಾಗಿಬಹುದು ಎಂದಿದ್ದಾರೆ ಜಂಪಾ.
ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದರು. ಈ ಸಂದರ್ಭದಲ್ಲಿ ಸ್ಟೋಕ್ಸ್ ಮೂರು ಮಾದರಿಯಲ್ಲಿಯೂ ಆಡುವುದು ತನ್ನಿಂದ ಅಸಾಧ್ಯ ಎಂಬುದನ್ನು ಹೇಳಿಕೊಂಡಿದ್ದರು. ಇದಕ್ಕೆ ಖವಾಜ ಬೆಂಬಲ ವ್ಯಕ್ತಪಡಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. "ಪ್ರಸ್ತುತ ಟಿ20 ವಿಶ್ವಕಪ್ ಹತ್ತಿರದಲ್ಲಿರುವ ಕಾರಣ ಏಕದಿನ ಮಾದರಿ ನಿಜಕ್ಕೂ ಪ್ರಮುಖವಲ್ಲ ಎನಿಸುತ್ತದೆ. ಎಲ್ಲಾ ಮಾದರಿಯಲ್ಲಿಯೂ ಆಡಲು ಸಾಧ್ಯವಾಗದ ಕಾರಣ ಯಾವುದಾದರೂ ಒಂದನ್ನು ಬಿಟ್ಟುಕೊಡಬೇಕಾಗುತ್ತದೆ" ಎಂದಿದ್ದರು ಉಸ್ಮಾನ್ ಖವಾಜ.