ಆಸ್ಟ್ರೇಲಿಯಾದ ಬ್ಯಾಟ್ಸಮ್ಯಾನ್ ಡೇವಿಡ್ ವಾರ್ನರ್ ರನ್ ಗಳಿಸಲು ಪರದಾಟ ನಡೆಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹುಸಿಗೊಳಿಸಿದರು. ಆದರೆ ಶನಿವಾರ, ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಜೊತೆಗೂಡಿ ವಾರ್ನರ್ 9.5 ಓವರ್ ಗಳಲ್ಲಿ 100 ರನ್ ಗಳಿಸಿ ಜೊತೆಯಾಟದ ಕಾಣಿಕೆ ನೀಡಿದರು. ಇದಾದ ಬಳಿಕ 11ನೇ ಓವರ್ ನ 5ನೇ ಎಸೆತದಲ್ಲಿ 36 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 64 ರನ್ ಗಳಿಸಿ ಹೆಡ್ ಔಟಾದರು. ನಂತರ ಮುಂದಿನ ಎಸೆತದಲ್ಲಿ ನಾಯಕ ಮಿಚೆಲ್ ಮಾರ್ಷ್ ಕೂಡ ಡಕ್ ಔಟ್ ಆಗಿ ಪೆವಿಲಿಯನ್ ಗೆ ಮರಳಿದರೂ ವಾರ್ನರ್ ಬಿರುಗಾಳಿ ಅಬ್ಬರ ನಿಲ್ಲಲಿಲ್ಲ.

ಅವರು ತಮ್ಮ ಬ್ಯಾಟ್ ನಿಂದ ವಿಧ್ವಂಸಕ ಆಟವನ್ನು ಮುಂದುವರೆಸಿದರು. ಅಂತಿಮವಾಗಿ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಅದ್ಭುತ ಶತಕ ಗಳಿಸಿದರು. ವಾರ್ನರ್ ಕೇವಲ 85 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ ಶತಕ ಪೂರೈಸಿದರು. ಇದರೊಂದಿಗೆ ಅವರು ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡರು.
ODIಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ವಿಷಯದಲ್ಲಿ ವಾರ್ನರ್, ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದರು, ಅವರ ಹೆಸರಿನಲ್ಲಿ ಏಕದಿನದಲ್ಲಿ 20 ಶತಕಗಳಿವೆ. ಈ ಮೂಲಕ ಅತಿ ಹೆಚ್ಚು ಶತಕ ಸಿಡಿಸಿದ ವಿಶ್ವದ 14ನೇ ಬ್ಯಾಟ್ಸಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ, ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಇಂಗ್ಲಿಷ್ ಬ್ಯಾಟ್ಸಮ್ಯಾನ್ ಜೋ ರೂಟ್ ಅವರನ್ನು ಸರಿಗಟ್ಟಿದರು.
ರೂಟ್ ಮತ್ತು ವಾರ್ನರ್ ಹೆಸರಿನಲ್ಲಿ 46 ಶತಕಗಳು ದಾಖಲಾಗಿವೆ. ಆದರೆ ವಾರ್ನರ್ ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದರು. ಇಬ್ಬರೂ ತಮ್ಮ ಹೆಸರಿನಲ್ಲಿ 5 ಶತಕಗಳನ್ನು ದಾಖಲಿಸಿದ್ದಾರೆ. ಸಕ್ರಿಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (76) ಮಾತ್ರ ವಾರ್ನರ್ ಗಿಂತ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.
ಇದಲ್ಲದೆ, ವಾರ್ನರ್ ಆರಂಭಿಕರಾಗಿ 6 ಸಾವಿರ ರನ್ ಪೂರೈಸಿದ ವಿಶ್ವದ ನಾಲ್ಕನೇ ಬ್ಯಾಟ್ಸಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 140ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿ ದಾಖಲಾಗಿದೆ. ಅವರು 121 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ಹಿರಿಮೆ ಹೊಂದಿದ್ದಾರೆ.
ಇದರೊಂದಿಗೆ ತಮ್ಮ ತಂಡದಲ್ಲಿ ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 10 ಓವರ್ ಗಳಲ್ಲಿ (9.5 ಓವರ್ಗಳಲ್ಲಿ) 100 ರನ್ ಗಳಿಸಿದ ಎರಡನೇ ತಂಡವಾಗಿದೆ. ಇದಕ್ಕೂ ಮುನ್ನ 2017ರಲ್ಲಿ ಶ್ರೀಲಂಕಾ 9.4 ಓವರ್ ಗಳಲ್ಲಿ ಈ ಸಾಧನೆ ಮಾಡಿತ್ತು.
ಡೇವಿಡ್ ವಾರ್ನರ್ ಅವರ ಕಳಪೆ ಫಾರಂನಿಂದಾಗಿ ವಿಮರ್ಶಕರು ನಿವೃತ್ತಿಯಾಗುವಂತೆ ಸಲಹೆ ನೀಡಲು ಪ್ರಾರಂಭಿಸಿದರು, ಆದರೆ ಶನಿವಾರ ಅವರು ತಮ್ಮ ಬ್ಯಾಟ್ ನಿಂದ ಟೀಕಾಕಾರರನ್ನು ಮೌನಗೊಳಿಸಿದ್ದಾರೆ.