ಜನವರಿ 3 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಆಸ್ಟ್ರೇಲಿಯದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ಅವರು ಎರಡೂ ತಂಡಗಳ ಆಟಗಾರರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಆಂಥೋನಿ ಅಲ್ಬನೀಸ್ ಗಮನ ಸೆಳೆದಿದ್ದಾರೆ. ಅಲ್ಬನೀಸ್ ಅವರು ಬುಮ್ರಾ ಅವರನ್ನು ಹೊಗಳಿದ್ದಾರೆ.
ಆಲ್ಬನೀಸ್ ಎರಡೂ ತಂಡಗಳೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಆಸ್ಟ್ರೇಲಿಯಾ ಮತ್ತು ಭಾರತ ಈಗಾಗಲೇ ಬೇಸಿಗೆಯಲ್ಲಿ ಕೆಲವು ಶ್ರೇಷ್ಠ ಕ್ರಿಕೆಟ್ ಅನ್ನು ನಮಗೆ ತೋರಿಸಿವೆ. ಶುಕ್ರವಾರದಂದು ಐದನೇ ಟೆಸ್ಟ್ ಆರಂಭವಾದಾಗ, ಮೆಕ್‌ಗ್ರಾತ್ ಫೌಂಡೇಶನ್, ಲೆಟ್ಸ್ ಆಸ್ಟ್ರೇಲಿಯಾದ ಮಹತ್ತರವಾದ ಕೆಲಸವನ್ನು ಬೆಂಬಲಿಸಲು ಸಿಡ್ನಿ ಸ್ಟೇಡಿಯಂ ಗುಲಾಬಿ ಬಣ್ಣದಿಂದ ತುಂಬಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಅಲ್ಬನೀಸ್ ಸಾಕಷ್ಟು ಹೊಗಳಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. 'ಬುಮ್ರಾ ಎಡಗೈಯಿಂದ ಬೌಲಿಂಗ್ ಮಾಡಬೇಕು ಅಥವಾ ಒಂದೇ ಒಂದು ಹೆಜ್ಜೆ ಹಿಂದಕ್ಕೆ ಬೌಲಿಂಗ್ ಮಾಡಬೇಕು ಎಂದು ನಾವು ಇಲ್ಲಿ ಕಾನೂನನ್ನು ಜಾರಿಗೊಳಿಸಬಹುದು. ಅವನು ಬೌಲಿಂಗ್ ಮಾಡಿದಾಗಲೆಲ್ಲ ತುಂಬಾ ರೋಮಾಂಚನಕಾರಿ ಎನಿಸುತ್ತದೆ ಎಂದು ಬುಮ್ರಾ ಅವರ ಬಗ್ಗೆ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಜಸ್ಪ್ರೀತ್ ಬುಮ್ರಾ ಇಲ್ಲಿಯವರೆಗೆ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಕಾರ್ಯವೈಖರಿಯಿಂದಾಗಿ ಅಲ್ಬನೀಸ್ ಅವರಿಗೆ ಬುಮ್ರಾ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಬುಮ್ರಾ ಅವರು 44ನೇ ಪಂದ್ಯದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತ್ತು. ಆ ಬಳಿಕ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿತ್ತು. ಇದಾದ ಬಳಿಕ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಮಳೆಯಿಂದಾಗಿ ಆಸ್ಟ್ರೇಲಿಯಾ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ 5ನೇ ದಿನದ ಅಂತಿಮ ಸೆಷನ್‌ನಲ್ಲಿ ಭಾರತ ತಂಡವನ್ನು ಆಲೌಟ್ ಮಾಡುವ ಮೂಲಕ ಕಾಂಗರೂ ಪಡೆ ಗೆದ್ದಿದೆ.
ಕಳೆದ 10 ವರ್ಷಗಳಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಭಾರತದ ಕೈಯಲ್ಲಿದೆ. ಆದರೆ ಈ ಬಾರಿ ಆಸ್ಟ್ರೇಲಿಯಾ ತನ್ನ ಬರವನ್ನು ಕೊನೆಗಾಣಿಸಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳಿಗೂ ಕೊನೆಯ ಪಂದ್ಯ ನಿರ್ಣಾಯಕವಾಗಲಿದೆ. ಒಂದು ವೇಳೆ ಭಾರತ ತಂಡ ಗೆಲುವು ದಾಖಲಿಸಿದರೆ ಸರಣಿ ಡ್ರಾನಲ್ಲಿ ಅಂತ್ಯವಾಗಲಿದೆ. ಆದರೆ ಆಸ್ಟ್ರೇಲಿಯಾ ಗೆದ್ದರೆ ಟ್ರೋಫಿಯ ಬರ ನೀಗಲಿದೆ.