ಕ್ರಿಕೆಟ್ ಆಟದಲ್ಲಿ ಅದೆಷ್ಟೋ ಆಟಗಾರರು ಧಮಾಕೆದಾರ್ ಬ್ಯಾಟಿಂಗ್ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ. ಇನ್ನು ಹಲವು ಆಟಗಾರರು ಏಕಾಂಗಿ ಪ್ರದರ್ಶನದಿಂದ ವಿಶ್ವದ ಚಿತ್ತ ಕದ್ದಿದ್ದಾರೆ. ಸೋಲುವ ಪಂದ್ಯದಲ್ಲಿ ಗೆಲುವಿನ ದೀಪ ಬೆಳಗಿಸಿದ ಹಲವು ಆಟಗಾರರು ಮಿಂಚಿದ್ದಾರೆ. ಈ ಎಲ್ಲ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಏಕದಿನ ಕ್ರಿಕೆಟ್‌ನಲ್ಲಿ ಒಂದು ನಕ್ಷತ್ರದಂತೆ ಕಂಗೊಳಿಸುತ್ತಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಸೋಮವಾರ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು. ಅದಾದ ಬಳಿಕ ಈಗ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೆಲಿಯಾ ತಂಡದ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಿದ್ದು ಈ ಪ್ಲೇಯರ್, ತಮ್ಮ ಸ್ಪಿನ್ ಬೌಲಿಂಗ್‌ನಿಂದಲೂ ಮೋಡಿ ಮಾಡಿದ್ದರು. ವಿಶ್ವದ ಅಗ್ರ ಗಣ್ಯ ಆಲ್‌ರೌಂಡರ್‌ಗಳಲ್ಲಿ ಇವರಿಗೂ ಸ್ಥಾನ. ಇವರೇ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್‌ವೆಲ್.

ಸೋಮವಾರ ಗ್ಲೇನ್ ಮ್ಯಾಕ್ಸ್‌ವೆಲ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರ ದಿಢೀರ್ ನಿವೃತ್ತಿ ನಿರ್ಧಾರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇವರು ಇತ್ತೀಚಿಗಷ್ಟೇ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕೆ ಇಳಿದಿದ್ದರು. ಆದರೆ ಗಾಯದ ಕಾರಣದಿಂದ ಲೀಗ್‌ನ ಮಧ್ಯದಲ್ಲೇ ಹೊರ ನಡೆದರು. ಈಗ ಇವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಗ್ಲೇನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ತಂಡದ ಪರ 149 ಏಕದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ವೇಳೆ 33.81ರ ಸರಾಸರಿಯಲ್ಲಿ 3990 ರನ್ ಸಿಡಿಸಿದ್ದಾರೆ. ಈ ವೇಳೆ 4 ಶತಕ, 23 ಅರ್ಧಶತಕಗಳು ಸೇರಿವೆ. ಈ ವೇಳೆ ಬೌಲಿಂಗ್‌ನಲ್ಲೂ ಮ್ಯಾಕ್ಸ್‌ವೆಲ್ 77 ವಿಕೆಟ್ ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಇವರು ಒಬ್ಬರು. ಇಷ್ಟೇ ಅಲ್ಲದೆ ರನ್ ಚೇಸ್ ಮಾಡುವಾಗ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಗ್ಲೇನ್ ಮ್ಯಾಕ್ಸ್‌ವಲ್ ತಂಡ ಸೇರುವ ಕನಸಿನಲ್ಲಿದ್ದಾರೆ. ಮ್ಯಾಕ್ಸ್‌ವೆಲ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳದೆ ಇದ್ದರೂ, ಈ ಫಾರ್ಮೆಟ್‌ನಿಂದ ಅವರು ತುಂಬ ದೂರ ಸರಿದಿದ್ದಾರೆ. ಫೈನಲ್ ವರ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸುವಾಗ ಮ್ಯಾಕ್ಸ್‌ವೆಲ್ ಸ್ವತಃ ನಿವೃತ್ತಿ ಘೋಷಿಸಿದರು. ಈ ಸಮಯದಲ್ಲಿ, ದೇಹವು ಪ್ರತಿಕ್ರಿಯಿಸುತ್ತಿರುವುದರಿಂದ ತಂಡವನ್ನು ಸ್ವಲ್ಪ ನಿರಾಶೆಗೊಳಿಸುತ್ತಿದ್ದೇನೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು.