
ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ತಮ್ಮ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದಾರೆ. ಬಹುಶಃ ಇದು ತನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ವರ್ಷವಾಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವಾರ್ನರ್ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಭಾಗವಾಗಿದ್ದಾರೆ.
ಬಿಗ್ ಬ್ಯಾಷ್ ಲೀಗ್‌ನ ಪಂದ್ಯಕ್ಕೂ ಮುನ್ನ ಮಾತನಾಡಿದ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಕೊನೆಯ ವರ್ಷವಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ನ ಮೇಲೆ ತನ್ನ ಚಿತ್ತ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಹೀಗಾಗಿ ವಾರ್ನರ್ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾ ಪರವಾಗಿ ಎಲ್ಲಾ ಮಾದರಿಯಲ್ಲಿಯೂ ಆಡುತ್ತಿರುವ ವಾರ್ನರ್ ಸುದೀರ್ಘ ಕಾಲದಿಂದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ಮಾದರಿಯಲ್ಲಿಯೂ ಒಟ್ಟಾಗಿ ವಾರ್ನರ್ 17,000ಕ್ಕೂ ಅಧಿಕ ರನ್‌ಗಳಿಸಿದ್ದಾರೆ. ಇದರಲ್ಲಿ ಟೆಸ್ಟ್ ಮಾದರಿಯಲ್ಲಿ ಗಳಿಸಿದ 8132 ರನ್ ಕೂಡ ಸೇರಿದೆ. 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಬರ ಅನುಭವಿಸಿದ್ದ ವಾರ್ನರ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿ ಶತಕ ಸಿಡಿಸುವ ಮೂಲಕ ಶತಕದ ಬರ ನೀಗಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಾರ್ನರ್ ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಸರಣಿಯ ಗೆಲುವು ಹಾಗೂ ಈ ವರ್ಷದ ಆಶಸ್ ಸರಣಿಯ ಗೆಲುವು ತನಗೆ ಹೆಚ್ಚಿನ ಸ್ಪೂರ್ತಿ ನೀಡಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ನಾನು ಕೋಚ್ ಹಾಗೂ ಆಯ್ಕೆಗಾರರ ಮುಂದೆಯೂ ಹೇಳಿಕೊಂಡಿದ್ದು ಅವರು ನನ್ನನ್ನು ಅಲ್ಲಿ ಮೋಡಲು ಬಯಸಿದ್ದಾರೆ ಎಂದು ಕೂಡ ಹೇಳಿದ್ದಾರೆ.
ಇನ್ನು ಫೆಬ್ರವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಪ್ರಮುಖವಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು ಈ ಸರಣಿ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಟೆಸ್ಟ್ ಮಾದರಿಯಲ್ಲಿ ಎರಡು ಬಲಿಷ್ಠ ತಂಡಗಳ ಕಾದಾಟವನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಹಾತೊರೆಯುತ್ತಿರುವುದರಲ್ಲಿ ಅನುಮಾನವಿಲ್ಲ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್