
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5 ಶನಿವಾರದಂದು 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುನ್ನಾ ದಿನವೇ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಟ್ ಕೊಹ್ಲಿಗೆ ಶುಭಹಾರೈಸಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ರನ್‌ಗಳ ಅಂತರದಿಂದ ರೋಚಕವಾಗಿ ಗೆಲುವು ಸಾಧಿಸಿದ ಬಳಿಕ ಆಸಿಸ್ ಆಲ್‌ರೌಂಡರ್ ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಶುಭಹಾರೈಸಿದ್ದಾರೆ.
"ನನ್ನ ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿ ನಾಳೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅವರ ದಿನ ಅದ್ಭುತವಾಗಿರಲಿ" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಬಳಿಕ ಮಾತನಾಡುತ್ತಾ ಶುಭಹಾರೈಸಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿಯ ವಿರ್ಶವಕಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 220 ರನ್‌ಗಳನ್ನು ಗಳಿಸಿದ್ದು ಒಂದು ಬಾರಿ ಮಾತ್ರವೇ ವಿಕೆಟ್ ಕಳೆದುಕೊಂಡಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ಅಜೇಯವಾಗುಳಿದಿದ್ದು ಹೀಗಾಗಿ ಅವರ ಸರಾಸರಿ ಭರ್ತಿ 220 ಆಗಿದೆ. ಈ ಟೂರ್ನಿಯಲ್ಲಿ ಕೊಹ್ಲಿ ಮೂರು ಅರ್ಧ ಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾತ್ರವೇ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿದ್ದರು.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಜೇಯ 82 ರನ್‌ಗಳಿಸಿದ ವಿರಾಟ್ ಕೊಹ್ಲಿ ಒಟ್ಟು ಈ ಬಾರಿ ಮೂರು ಅರ್ಧ ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಸದ್ಯ ಕೊಹ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. ಭಾನುವಾರ ಸೂಪರ್ 123 ಹಂತದ ಅಂತಿಮ ಪಂದ್ಯವನ್ನು ಭಾರತ ಜಿಂಬಾಬ್ವೆ ತಂಡದ ವಿರುದ್ಧ ಆಡಲಿದ್ದು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.