ಆಸ್ಟ್ರೇಲಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಈ ವೇಳೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಾಯಿತು. ಈ ಸರಣಿಯಲ್ಲಿ ಪ್ರವಾಸಿ ಆಸೀಸ್ ಏಕಪಕ್ಷೀಯ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಎರಡು ದಶಕದ ಬಳಿಕ ಆಸ್ಟ್ರೇಲಿಯಾ, ಲಂಕಾ ನೆಲದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇನ್ನು ಈ ವೇಳೆ ತಂಡದ ಮುಂದಾಳತ್ವವನ್ನು ಬಹು ವರ್ಷಗಳ ಬಳಿಕ ಸ್ಟೀವನ್ ಸ್ಮಿತ್ ವಹಿಸಿಕೊಂಡಿದ್ದರು. ಇದೇ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಎಡಗೈ ಸ್ಪಿನ್ ಬೌಲರ್ ಮ್ಯಾಥ್ಯೂ ಕುಹ್ನೆಮನ್ ಅವರ ಬೌಲಿಂಗ್ ಶೈಲಿಯು ಪ್ರಶ್ನಾರ್ಹವಾಗಿದೆ.
ಮ್ಯಾಥ್ಯೂ ಕುಹ್ನೆಮನ್ ಶ್ರೀಲಂಕಾದಲ್ಲಿ ಅಮೋಘ ಬೌಲಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಇವರ ಆಡಿದ 2 ಪಂದ್ಯಗಳಲ್ಲಿ 16 ವಿಕೆಟ್ ಸಾಧನೆ ಮಾಡಿದ್ದರು. ಈ ವೇಳೆ ಒಂದು ಬಾರಿ ಐದು ವಿಕೆಟ್ ಪಡೆದು ಸಹ ಬೀಗಿದ್ದರು. ಈಗ ಇವರ ಬೌಲಿಂಗ್ ಆಕ್ಷನ್ ಅನುಮಾನಾಸ್ಪದವಾಗಿದೆ ಎಂದು ತಿಳಿದು ಬಂದಿದೆ. ಇವರು ತಮ್ಮ ಶೈಲಿಯನ್ನು ಸಾಬೀತು ಪಡಿಸಲು ಕುಹ್ನೆಮನ್ ಮುಂದಿನ ಮೂರು ವಾರಗಳಲ್ಲಿ ಐಸಿಸಿ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರದಲ್ಲಿ ತನ್ನ ಬೌಲಿಂಗ್ ಶೈಲಿಯನ್ನು ಪರೀಕ್ಷಿಸಬೇಕಾಗುತ್ತದೆ.

ಆಸ್ಟ್ರೇಲಿಯಾದ 28 ವರ್ಷ ಸ್ಪಿನ್ ಬೌಲರ್ ಮ್ಯಾಥ್ಯೂ ಕುಹ್ನೆಮನ್ ವೃತ್ತಿ ಆರಂಭಿಸಿದಾಗಿನಿಂದಲೂ ಬೌಲಿಂಗ್ ಆಕ್ಷನ್ ಬಗ್ಗೆ ಇದೇ ಮೊದಲ ಬಾರಿಗೆ ಅಪಸ್ವರ ಕೇಳುತ್ತಿದೆ. ಮ್ಯಾಥ್ಯೂ ಕುಹ್ನೆಮನ್ ಈ ಪರೀಕ್ಷೆಯ ವರದಿ ಬರುವವರೆಗೂ ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸಬಹುದಾಗಿದೆ. ಇವರು ತಮ್ಮ ಬೌಲಿಂಗ್ ಶೈಲಿ ಸರಿಯಾಗಿದೆ ಎಂದು ಸಾಬೀತುಪಡಿಸಲು ವಿಫಲರಾದಲ್ಲಿ ನಿಷೇಧದ ಬಿಸಿ ಎದುರಿಸಬೇಕಾಗುತ್ತದೆ.
ಐಸಿಸಿ ನಿಯಮದ ಪ್ರಕಾರ ಬೌಲರ್ ತನ್ನ ಮೊಣಕೈಯನ್ನು 15 ಡಿಗ್ರಿಗಳಷ್ಟು ಬಗ್ಗಿಸಿ ಬೌಲಿಂಗ್ ಮಾಡಲು ಅನುಮತಿ ನೀಡುತ್ತದೆ. ಒಬ್ಬ ಬೌಲರ್ ಈ ನಿಯಮ ಮೀರಿದಲ್ಲಿ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಮ್ಯಾಥ್ಯೂ ಕುಹ್ನೆಮನ್ ಇನ್ನೇನು ಕೆಲವೇ ದಿನಗಳಲ್ಲಿ ಬ್ರಿಸ್ಬೇನ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಬೌಲಿಂಗ್ ಶೈಲಿಯ ಪರೀಕ್ಷೆಗೆ ಒಳ ಪಡಲಿದ್ದಾರೆ.
ಗ್ಯಾಲೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನೂ ಕಾಂಗರೂ ತಂಡ ಏಕಪಕ್ಷೀಯವಾಗಿ ಗೆದ್ದಿತು. ಈ ಪಂದ್ಯದ ಬಳಿಕವೇ ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್ ಆಕ್ಷನ್ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.
ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಕುಹ್ನೆಮನ್‌ಗೆ ಅವರಿಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. 2017 ರಲ್ಲಿ ದೇಶೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ಎಡಗೈ ಸ್ಪಿನ್ನರ್ ಅವರ ಬೌಲಿಂಗ್ ಶೈಲಿಯನ್ನು ಎಂದಿಗೂ ಅನುಮಾನಸ್ಪದ ಎಂದು ಪರಿಗಣಿಸಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
2017 ರಲ್ಲಿ ಕುಹ್ನೆಮನ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ 124 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಸೇರಿವೆ. ಎಂಟು ವರ್ಷಗಳ ವೃತ್ತಿಪರ ಕ್ರಿಕೆಟ್‌ನಲ್ಲಿ ಅವರ ಬೌಲಿಂಗ್ ಶೈಲಿಯನ್ನು ಪ್ರಶ್ನಿಸಲಾಗುತ್ತಿರುವುದು ಇದೇ ಮೊದಲು.