ಆರ್‌ಸಿಬಿ ವಿರುದ್ಧ ಹೀನಾಯ ಸೋಲು; ನೋವಲ್ಲೂ ತಂಡದ ಪಾಲಿಗೆ ಹೀರೋ ಆದ ಡಿಸಿ ನಾಯಕ ಅಕ್ಷರ್ ಪಟೇಲ್
Axar Patel: ದೆಹಲಿಯಲ್ಲಿ ಸೋಮವಾರ (ಏಪ್ರಿಲ್ 27) ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದ ಬಳಿಕ ಹೀನಾಯ ಸೋಲಿನ ನೋವಲ್ಲಿದ್ದ ಡಿಸಿ ನಾಯಕ ಅಕ್ಷರ್ ಪಟೇಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹತ್ವದ ಮಾಹಿತಿ ಹಂಚಿಕೊಂಡು ತಂಡದ ಪಾಲಿಗೆ ಹೀರೋ ಆಗಿದ್ದಾರೆ.
ಪಂದ್ಯದ ಮೊದಲ ನಾಲ್ಕು ಓವರ್‌ಗಳಲ್ಲಿ ಕೇವಲ 9 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಥಿತಿ ಕಂಡು ಇಡೀ ತಂಡದ ಮ್ಯಾನೇಜ್‌ಮೆಂಟ್ ಮತ್ತು ಸ್ಥಳೀಯ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದರು. ಈ ಹೀನಾಯ ಸೋಲಿನ ನಂತರ ತಂಡದ ಆಟಗಾರರಷ್ಟೇ ಅಲ್ಲದೆ, ಸಹಾಯಕ ಸಿಬ್ಬಂದಿ ಕೂಡ ಮಾನಸಿಕವಾಗಿ ಕುಗ್ಗಿದ್ದಾರೆ. ಇಂತಹ ಸಮಯದಲ್ಲಿ ಎಲ್ಲರನ್ನೂ ಹುರಿದುಂಬಿಸಿ ಮತ್ತೆ ಪುಟಿದೇಳುವಂತೆ ಮಾಡುವುದು ತನ್ನ ಜವಾಬ್ದಾರಿಯಾಗಿದೆ ಎಂದು ಅಕ್ಷರ್ ಮಹತ್ವದ ಹೇಳಿಕೆ ನೀಡಿದ್ದಾರೆ.

ಪಂದ್ಯದ ಆರಂಭದಲ್ಲೇ ಆದ ಆಘಾತದಿಂದ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ತಂಡದ ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ. ಈ ಸೋಲನ್ನು ಮರೆತು ಮುಂದಿನ ಪಂದ್ಯಗಳಲ್ಲಿ ಹೇಗೆ ಕಮ್‌ಬ್ಯಾಕ್ ಮಾಡಬೇಕು ಎಂಬುದರತ್ತ ಗಮನ ಹರಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂಜರಿಕೆಯಿಲ್ಲದೆ ಸುದ್ದಿಗಾರರ ಮುಂದೆ ಬಂದ ಅಕ್ಷರ್
ಪಂದ್ಯ ಸೋತಾಗ ಸಾಮಾನ್ಯವಾಗಿ ನಾಯಕರು ಮಾಧ್ಯಮಗಳ ಮುಂದೆ ಬರಲು ಹಿಂಜರಿಯುತ್ತಾರೆ. ಆದರೆ ಅಕ್ಷರ್ ಪಟೇಲ್ ಯಾವುದೇ ಹಿಂಜರಿಕೆಯಿಲ್ಲದೆ ಸುದ್ದಿಗಾರರ ಮುಂದೆ ಬಂದು ಸೋಲಿನ ಹೊಣೆ ಹೊತ್ತಿರುವುದು ಅವರ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿದೆ. ಡೆಲ್ಲಿ ತಂಡವು ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಪವಾಡವೇ ನಡೆಯಬೇಕಿದೆ.
ಆರ್‌ಸಿಬಿ ವಿರುದ್ಧದ ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಸತತವಾಗಿ ಮೂರು ಪಂದ್ಯಗಳಲ್ಲಿ ಪರಾಭವಗೊಂಡಂತಾಗಿದೆ. ಇದೀಗ ಅಕ್ಷರ್ ಪಟೇಲ್ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದಾಗಿ ಅವರ ಪ್ಲೇಆಫ್ ಹಾದಿ ಈಗ ಅತ್ಯಂತ ಕಠಿಣ ಮತ್ತು ಸವಾಲಿನಿಂದ ಕೂಡಿದೆ. ಆದರೆ ನಾಯಕ ಅಕ್ಷರ್ ಪಟೇಲ್ ಮಾತ್ರ ಈ ಸೋಲಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಮುಂಬರುವ ಪಂದ್ಯಗಳ ಮೇಲೆ ಸಂಪೂರ್ಣ ಗಮನ ಹರಿಸಲು ಅವರು ನಿರ್ಧರಿಸಿದ್ದಾರೆ.
ತಂಡವನ್ನು ಪ್ರೇರೇಪಿಸಿದ ಅಕ್ಷರ್ ಪಟೇಲ್
"ಒಬ್ಬ ನಾಯಕನಾಗಿ ಕಲಿಯಬೇಕಾದ ವಿಷಯಗಳು ಬಹಳಷ್ಟಿವೆ. ಕೇವಲ ಆಟಗಾರರಷ್ಟೇ ಅಲ್ಲ, ಸಹಾಯಕ ಸಿಬ್ಬಂದಿ ಮತ್ತು ಮಾಲೀಕರು ಎಲ್ಲರನ್ನೂ ನೀವು ಪ್ರೇರೇಪಿಸಬೇಕಾಗುತ್ತದೆ. ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ಬ್ಯಾಟರ್‌ಗಳು ಏನೂ ಮಾಡಲಿಲ್ಲ, ಬೌಲರ್‌ಗಳು ಕೈಕೊಟ್ಟರು ಎಂದು ನೆಪಗಳನ್ನು ನೀಡುವುದು. ಮತ್ತೊಂದು ಆಯ್ಕೆಯೆಂದರೆ ಒಂದು ತಂಡವಾಗಿ ಒಟ್ಟಾಗಿ ನಿಂತು ಮುಂಬರುವ ಪಂದ್ಯಗಳಿಗಾಗಿ ಸಿದ್ಧತೆ ನಡೆಸುವುದು. ನಾವು ತಂಡವಾಗಿ ಜೊತೆಗೂಡಿ ಹೋರಾಡುತ್ತೇವೆ," ಎಂದು ಹೇಳಿದರು.
"ತಂಡದಲ್ಲಿ ಅತಿಯಾದ ಬದಲಾವಣೆಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ನಾನು ನಂಬುವುದಿಲ್ಲ. ಆದ್ದರಿಂದ ತಂಡದಲ್ಲಿ ಹೆಚ್ಚು ಬದಲಾವಣೆಗಳೇನು ಇರುವುದಿಲ್ಲ. ಆದರೆ ಮಾನಸಿಕವಾಗಿ ಸ್ಥಿರವಾಗಿರುವುದು ಮತ್ತು ಎಲ್ಲರೂ ಒಟ್ಟಾಗಿ ಮುಂದೆ ಸಾಗುವುದು ಬಹಳ ಮುಖ್ಯ," ಎಂದು ಹೇಳಿದರು.
ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನಕ್ಕೆ ಕಾರಣವೇನು ಎಂದು ಕೇಳಿದಾಗ ಅಕ್ಷರ್ ಪಟೇಲ್ ಅಅವರು ಒಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡರು. ಪಂಜಾಬ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ 265 ರನ್‌ಗಳ ಬೃಹತ್ ಗುರಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ನೋವು ಆರ್‌ಸಿಬಿ ವಿರುದ್ಧ ಆಡುವಾಗಲೂ ಆಟಗಾರರ ಮನಸ್ಸಿನಲ್ಲಿತ್ತು ಎಂದು ಹೇಳಿದ್ದಾರೆ.
ತಂಡದ ಆಟಗಾರರಿಗೆ ಧೈರ್ಯ ತುಂಬಿದ ಅಕ್ಷರ್
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಬರುವಾಗ ಹೆಚ್ಚಿನ ಒತ್ತಡವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷರ್, "ಐಪಿಎಲ್‌ನ ಪ್ರತಿ ಪಂದ್ಯದಲ್ಲೂ ಒತ್ತಡ ಇದ್ದೇ ಇರುತ್ತದೆ. ಕಳೆದ 8-9 ಪಂದ್ಯಗಳನ್ನು ಆಡುವಾಗಲೂ ಪ್ರತಿ ಪಂದ್ಯದಲ್ಲೂ ಒತ್ತಡವಿತ್ತು. ನಾವು ಒತ್ತಡವಿಲ್ಲದೆ ಆಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದೇ ಸಮಯದಲ್ಲಿ ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾಡಬೇಕು. ಹಿಂದಿನದ್ದನ್ನು ಮರೆತು ಪ್ರತಿದಿನ ತಯಾರಿಯತ್ತ ಗಮನ ಹರಿಸಬೇಕು. ಸುಲಭವಾಗಿ ಗೆಲುವು ಸಿಗುತ್ತದೆ ಎಂದು ಯಾರೂ ಭಾವಿಸಬಾರದು," ಎಂದು ಅವರು ಒತ್ತಿ ಹೇಳಿದರು. ಒಟ್ಟಿನಲ್ಲಿ ಹೀನಾಯ ಸೋಲಿನ ನೋವಿನಲ್ಲಿದ್ದ ತಂಡದ ಆಟಗಾರರಿಗೆ ಧೈರ್ಯ ತುಂಬುವುದರ ಜೊತೆಗೆ ಉತ್ಸಾಹವನ್ನು ಹೆಚ್ಚಿಸುವ ಕೆಲಸವನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅವರು ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications