ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಭಾನುವಾರ ದುಬೈನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಮೋಘ ಜಯ ದಾಖಲಿಸಿದೆ. ಈ ಜಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ಈ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದರು.
ವಿರಾಟ್ 450ಕ್ಕೂ ಹೆಚ್ಚು ದಿನಗಳ ಬಳಿಕ ಏಕದಿನ ಫಾರ್ಮೆಟ್‌ನಲ್ಲಿ ಶತಕ ಬಾರಿಸಿದ್ದು, ತಂಡದ ಮನೋಬಲವನ್ನು ಹೆಚ್ಚಿಸಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಹಲವು ದಾಖಲೆಗಳು ನಿರ್ಮಿಸಿದರು. ಇವರು 7 ಬೌಂಡರಿ ಸಹಾಯದಿಂದ 100 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ವಿರಾಟ್ ಬರೆದರು. ಈ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಹೇಳಿಕೆ ನೀಡಿದ್ದಾರೆ.

ಈ ಪಂದ್ಯದ ಬಗ್ಗೆ ಮಾತನಾಡಿರುವ ಅಕ್ಷರ್, "ನಾನು ಬ್ಯಾಟಿಂಗ್‌ಗೆ ಬಂದಾಗ ಭಾರತದ ಗೆಲುವಿಗೆ 19 ರನ್ ಅವಶ್ಯವಿತ್ತು. ಅಲ್ಲದೆ ವಿರಾಟ್ ಶತಕಕ್ಕೆ 14 ರನ್ ಬೇಕಿತ್ತು. ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಯಲ್ಲಿ ಹಾಕಿಕೊಳ್ಳುತ್ತಲ್ಲೇ ಮೈದಾನ ಪ್ರವೇಶಿಸಿದೆ. ಅದಾಗಲೇ ವಿರಾಟ್ ಫುಲ್ ಕಾನ್ಫಿಡೆಂಟ್‌ನಲ್ಲಿ ಬ್ಯಾಟ್ ಮಾಡ್ತಾ ಇದ್ದರು. ಇವರಿಗೆ ಸಪೋರ್ಟ್ ಮಾಡಿದ್ರೆ ಸಾಕು ಎಂಬ ಕಲ್ಪನೆ ನನ್ನ ತಲೆಯಲ್ಲಿ ಇತ್ತು" ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ ಶತಕಕ್ಕೂ ಮುನ್ನ ಈ ಒಂದು ಭಯ ತಮಗೆ ಬಹುವಾಗಿ ಕಾಡಿತ್ತು ಎಂದು ಅಕ್ಷರ್ ಪಟೇಲ್ ತಿಳಿಸಿದ್ದಾರೆ. ವಿರಾಟ್ ಶತಕದ ಹೊಸ್ತಿಲಲ್ಲಿ ನಿಂತಾಗ ನಾನು ಬ್ಯಾಟ್ ಮಾಡಲು ಕ್ರೀಸ್‌ಗೆ ಇಳಿದೆ. ಆಗ ಬ್ಯಾಟ್‌ನ ಎಡ್ಜ್‌ಗೆ ಬಡಿದು ಬೌಂಡರಿ ಹೋಗುತ್ತದೆ ಎಂಬ ಭಯ ನನಗೆ ಬಹುವಾಗಿ ಕಾಡಿತ್ತು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಅವರ ಶತಕದ ಸಂಭ್ರಮವನ್ನು ನಾನು ಕ್ಲೋಸ್ ಆಗಿ ನೋಡಿದ್ದೆ. ಒಬ್ಬ ಮನುಷ್ಯ 50 ಓವರ್ ಫೀಲ್ಡಿಂಗ್ ಮಾಡಿ, ನಂತರ ಬಂದು ಈ ರೀತಿ ಬ್ಯಾಟ್ ಮಾಡ್ತಾನೇ ಎಂದು ಹೇಳಿದ್ರೆ ಆತ ಟೆಂಪರ್ಮೆಂಟ್ ಮೆಚ್ಚುವಹಂತದ್ದು ಎಂದು ಅಕ್ಷರ್ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಕಿಸ್ತಾನ ಮೊದಲು ಬ್ಯಾಟ್ ಮಾಡಿ 49.4 ಓವರ್‌ಗಳಲ್ಲಿ 241 ರನ್ ಸೇರಿಸಿತು. ಪಾಕ್ ಪರ ಸೌದ್ ಶಕೀಲ್ 62, ಮೊಹಮ್ಮದ್ ರಿಜ್ವಾನ್ 46 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಭಾರತದ ಪರ ಕುಲ್‌ದೀಪ್ 3, ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಬಳಿಸಿದರು. ಗುರಿಯನ್ನು ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿ ಅವರ ಅಮೋಘ ಶತಕ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ ಗುರಿಯನ್ನು 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು.