
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಯಾವುದೇ ಪಂದ್ಯಗಳನ್ನು ಸಹ ಹೈದರಾಬಾದ್‌ನಲ್ಲಿಆಯೋಜಿಸಲಾಗಿಲ್ಲ. ಈ ಕುರಿತು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿತ್ತು.
ಸಾಕಷ್ಟು ಟೀಕೆಗೆ ಒಳಗಾದ ನಂತರ ಇದೀಗ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ, ಕ್ರಿಕೆಟ್ ದಿಗ್ಗಜ ಮೊಹಮ್ಮದ್ ಅಜರುದ್ದೀನ್ ಅವರು ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಸಹ ಹೈದರಾಬಾದ್‌ನಲ್ಲಿ ಆಯೋಜಿಸಲಾಗದಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಆದರೆ, ಪಂದ್ಯ ಆಯೋಜನೆ ಬಗ್ಗೆ ಬಿಸಿಸಿಐ ನಿರ್ಧಾರವೇ ಅಂತಿಮ, ನಮ್ಮ ಪ್ರಯತ್ನ ನಾವು ಮಾಡಿದ್ದೇವೆ ಎಂದರು.
ಹೈದರಾಬಾದ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಕುರಿತು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಆದರೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ನಿರ್ಧಾರವೇ ಅಂತಿಮ. ನಾನು ಅಹ್ಮದಾಬಾದ್‌ಗೆ ಕೂಡ ಹೋಗಿ ಕಾರ್ಯದರ್ಶಿ ಜಯ್ ಶಾ ಅವರನ್ನು ಭೇಟಿಯಾಗಿ ಮಾತನಾಡಿದೆ. ನಾನು ಮನವಿ ಮಾಡಿಕೊಳ್ಳಬಹುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಅಜರುದ್ದೀನ್ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ತಮಗೆ ಸಹಾಯ ಮಾಡಿದ ರಾಜ್ಯ ಸರ್ಕಾರ ಹಾಗೂ ಸಕಾರಾತ್ಮಕವಾಗಿ ಟ್ವೀಟ್ ಮಾಡಿದ್ದ ಕೆಟಿಆರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಎಚ್‌ಸಿಎ ಹಳೆ ಮಂಡಳಿ ಸದಸ್ಯರು ಶಿವಲಾಲ್ ಯಾದವ್ ಮೇಲೆ ವಾಗ್ದಾಳಿ ನಡೆಸಿದ ಅಜರ್, ಎಚ್‌ಸಿಎ ಗೆ ಮಂಜೂರಾದ 200 ಕೋಟಿ ಏನಾಯಿತು? ಉಪ್ಪಲ್ ಅಲ್ಲದೇ ಬೇರೆ ಕ್ರೀಡಾಂಗಣ ಅಭಿವೃದ್ಧಿ ಪಡಿಸಿಲ್ಲವೇಕೆ? ಎಷ್ಟು ಮಂದಿ ಯುವ ಕ್ರಿಕೆಟರ್ ಗಳಿಗೆ ತರಬೇತಿ ಸಿಕ್ಕಿದೆ? ಈ ಬಗ್ಗೆ ಯಾಕೆ ಯಾರು ಪ್ರಶ್ನಿಸಲ್ಲ ಎಂದು ಟ್ರಾಲ್ ಪೇಜ್‌ಗಳಿಗೆ ಟಾಂಗ್ ಕೊಟ್ಟರು.
ಹೈದರಾಬಾದ್‌ನಲ್ಲಿ ಪಂದ್ಯ ಆಯೋಜಿಸಲು ಅವಕಾಶ ನೀಡದೆ ಇರಲು ಅವರು ನಿಖರವಾದ ಕಾರಣವನ್ನು ನೀಡಲಿಲ್ಲ, ಯಾರೂ ಸಹ ಹೋಂ ಪಿಚ್‌ನಲ್ಲಿ ಪಂದ್ಯಗಳನ್ನು ಈ ಬಾರಿ ಆಡುತ್ತಿಲ್ಲ, ಮುಂದೆ ನಮ್ಮದೇ ಯೋಜನೆಗಳಿವೆ, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮುಂದೆ ಈಗ ಆಯೋಜಿಸಿರುವ ಸ್ಥಳಗಳಲ್ಲಿ ಏನಾದರೂ ತೊಂದರೆ ಉಂಟಾದರೆ ಬ್ಯಾಕ್ ಅಪ್ ಯೋಚನೆ ಮಾಡುತ್ತೇವೆ ಎಂದು ಬಿಸಿಸಿಐ ಪ್ರತಿಕ್ರಿಯಿಸಿದೆ ಎಂದು ಅಜರ್ ಹೇಳಿದರು.