ಕೊಹ್ಲಿ, ರೋಹಿತ್ ಚೆನ್ನಾಗಿರುವಾಗ ತಂದಿಡಬೇಡಿ ಎಂದು ಮಾಜಿ ಕ್ರಿಕೆಟಿಗನ ವಿರುದ್ಧ ಕಿಡಿಕಾರಿದ ಗವಾಸ್ಕರ್

ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧಾರ ಕೈಗೊಂಡಿರುವುದಾಗಿ ಘೋಷಣೆ ಮಾಡಿದಾಗ ಉಂಟಾದ ಗೊಂದಲ ಮತ್ತು ವಿವಾದಗಳು ಈಗ ಹೆಮ್ಮರವಾಗಿ ಬೆಳೆದು ನಿಂತಿವೆ. ಹೌದು, ಕಳೆದ ಕೆಲ ದಿನಗಳಿಂದ ಟೀಮ್ ಇಂಡಿಯಾದಲ್ಲಿ ಜರುಗುತ್ತಿರುವ ವಿದ್ಯಮಾನಗಳು ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರವನ್ನು ಎತ್ತಿ ಹಿಡಿಯುತ್ತಿದೆ. ಮೊದಲಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದರೆ, ನಂತರದ ಕೆಲವೇ ದಿನಗಳಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದಲೂ ಕೂಡ ತೆಗೆದುಹಾಕಿತು.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದ ಸಂದರ್ಭದಲ್ಲಿ ಭಾರತ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಘೋಷಿಸಿತು. ಹೀಗೆ ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡು ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ಉಳಿದುಕೊಂಡರು. ನಾಯಕ ಸ್ಥಾನದಿಂದ ಹೊರಬಿದ್ದ ವಿರಾಟ್ ಕೊಹ್ಲಿ ಈ ವಿದ್ಯಮಾನದ ಕುರಿತಾಗಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲಿಲ್ಲ ಮತ್ತು ವಿರಾಟ್ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಯಾಕೆ ತೆಗೆದುಹಾಕಲಾಯಿತು ಎಂಬ ವಿಚಾರವನ್ನು ಬಿಸಿಸಿಐ ಆಗಲಿ ತಿಳಿಸಲಿಲ್ಲ.
ಇದಾದ ಬೆನ್ನಲ್ಲೇ ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ಹೇಳಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದರು. ಹೀಗೆ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವೈಯಕ್ತಿಕ ಕಾರಣಗಳಿಗಾಗಿ ಮತ್ತು ವಿಶ್ರಾಂತಿ ಪಡೆಯಲೆಂದು ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಹೀಗೆ ಇಬ್ಬರೂ ನಾಯಕರು ಒಂದೊಂದು ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಆಕ್ರೋಶವನ್ನು ಹೊರಹಾಕಿದ್ದರು. ಆದರೆ ವಿರಾಟ್ ಕೊಹ್ಲಿ ತಾನು ವಿಶ್ರಾಂತಿಗೋಸ್ಕರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುತ್ತೇನೆ ಎಂದು ಹೇಳಿಯೇ ಇಲ್ಲ ಹಾಗೂ ನಾನು ಏಕದಿನ ಪಂದ್ಯಗಳಲ್ಲಿ ಭಾಗವಹಿಸಲು ಸಿದ್ಧ ಎಂದು ಸ್ಪಷ್ಟನೆ ನೀಡಿದರು.
ಈ ಮೂಲಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಸುಳ್ಳು ಎಂಬುದು ಸಾಬೀತಾಯಿತು. ಹೀಗೆ ವಿರಾಟ್ ಕೊಹ್ಲಿಯವರ ಹೇಳಿಕೆ ನಂತರ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಮೊಹಮ್ಮದ್ ಅಜರುದ್ದೀನ್ ಮಾಡಿದ್ದ ಟ್ವೀಟ್ ವಿರುದ್ಧ ಇದೀಗ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕಿಡಿಕಾರಿದ್ದು ಈ ಕೆಳಕಂಡಂತೆ ಹೇಳಿದ್ದಾರೆ.

ಇಬ್ಬರೂ ಆಟಗಾರರು ಹೇಳಿಕೆ ನೀಡುವವರೆಗೂ ನಾವು ಯಾವುದನ್ನೂ ತೀರ್ಮಾನಿಸಬಾರದು
ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಮತ್ತು ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮೊಹಮ್ಮದ್ ಅಜರುದ್ದೀನ್ ಮಾಡಿದ್ದ ಟ್ವೀಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್ ಇಬ್ಬರೂ ಆಟಗಾರರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುವವರೆಗೂ ನಾವು ಯಾವುದೇ ತೀರ್ಮಾನಕ್ಕೆ ಬರಬಾರದು ಎಂದಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಈ ಕುರಿತಾಗಿ ಟ್ವೀಟ್ ಒಂದನ್ನು ಮಾಡಿದ್ದರು, ಆದರೆ ಮೊಹಮ್ಮದ್ ಅಜರುದ್ದೀನ್ ಅವರಿಗೆ ಸ್ಪಷ್ಟವಾದ ಮಾಹಿತಿ ಇದ್ದರೆ ಮಾತ್ರ ಮಾತನಾಡಲಿ ಇಲ್ಲವಾದರೆ ಆ ಕುರಿತು ಮಾತನಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ರೋಹಿತ್ ಮತ್ತು ನಾನು ಚೆನ್ನಾಗಿಯೇ ಇದ್ದೇವೆ ಎಂದ ಕೊಹ್ಲಿ
ಇನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬರ್ಥದಲ್ಲಿ ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮಾಡಿದ್ದರು. ಆದರೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಾನು ಮತ್ತು ರೋಹಿತ್ ಶರ್ಮಾ ತುಂಬಾ ಚೆನ್ನಾಗಿಯೇ ಇದ್ದೇವೆ ಎಂದು ಕಳೆದ ಎರಡೂವರೆ ವರ್ಷಗಳಿಂದ ಹೇಳಿ ಹೇಳಿ ನನಗೆ ಸಾಕಾಗಿದೆ ಎಂದು ಸ್ಪಷ್ಟನೆ ನೀಡಿದರು.

ಭಾರತ vs ದ. ಆಫ್ರಿಕಾ ಸರಣಿಗಳ ವೇಳಾಪಟ್ಟಿ
ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದ್ದು ಇದರ ವೇಳಾ ಪಟ್ಟಿ ಈ ಕೆಳಕಂಡಂತಿದೆ
ಮೊದಲ ಟೆಸ್ಟ್: ಡಿಸೆಂಬರ್ 26-30, ಸೂಪರ್‌ಸ್ಪೋರ್ಟ್ಸ್ ಪಾರ್ಕ್, ಸೆಂಚುರಿಯನ್
ಎರಡನೇ ಟೆಸ್ಟ್: ಜನವರಿ 3-7, ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್
ಮೂರನೇ ಟೆಸ್ಟ್: ಜನವರಿ 11-15, ನ್ಯೂಲ್ಯಾಂಡ್ಸ್, ಕೇಪ್ ಟೌನ್
ಹೀಗೆ 3 ಪಂದ್ಯಗಳ ಟೆಸ್ಟ್ ಸರಣಿ ಮುಗಿದ ನಂತರ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು ಅದರ ವೇಳಾಪಟ್ಟಿ ಹೀಗಿದೆ
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications