
ಕರಾಚಿ: ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಆಟದ ನೆರವಿನಿಂದ ಪಾಕಿಸ್ತಾನ್ ಸೂಪರ್ ಲೀಗ್ 2020ರ ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಮಂಗಳವಾರ (ನವೆಂಬರ್ 17) ನಡೆದ ಫೈನಲ್ ಪಂದ್ಯದಲ್ಲಿ ಲಾಹೋರ್ ಕಲಂದರ್ಸ್ ವಿರುದ್ಧ ಕಿಂಗ್ಸ್ 5 ವಿಕೆಟ್‌ಗಳ ಜಯ ಗಳಿಸಿದೆ.
ಕರಾಚಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಾಹೋರ್ ಕಲಂದರ್ಸ್, ತಮೀಮ್ ಇಕ್ಬಾಲ್ 35, ಫಖರ್ ಝಮಾನ್ 27, ಬೆನ್ ಡಂಕ್ 11, ಸೊಹೈಲ್ ಅಖ್ತರ್ 11, ಡೇವಿಡ್ ವೈಸ್ 14 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 134 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಕರಾಚಿ ಕಿಂಗ್ಸ್, ಶಾರ್ಜೀಲ್ ಖಾನ್ 13, ಬಾಬರ್ ಅಝಾಮ್ 63 (49 ಎಸೆತ), ಅಲೆಕ್ಸ್ ಹೇಲ್ಸ್ 11, ಚಾದ್ವಿಕ್ ವಾಲ್ಟನ್ 22, ನಾಯಕ ಇಮಾದ್ ವಾಸಿಮ್ 10 ರನ್ ಸೇರ್ಪಡೆಯೊಂದಿಗೆ 18.4ನೇ ಓವರ್‌ಗೆ 5 ವಿಕೆಟ್ ಕಳೆದು 135 ರನ್ ಗಳಿಸಿತು.
ಲಾಹೋರ್ ಕಲಂದರ್ ಇನ್ನಿಂಗ್ಸ್‌ನಲ್ಲಿ ಕರಾಚಿ ಕಿಂಗ್ಸ್‌ನ ವಾಕಸ್ ಮಸೂದ್, ಅರ್ಷದ್ ಇಕ್ಬಾಲ್ ಮತ್ತು ಉಮೈದ್ ಆಸಿಫ್ ತಲಾ 2 ವಿಕೆಟ್ ಪಡೆದರೆ, ಕರಾಚಿ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಕಲಂದರ್ಸ್‌ನ ಹ್ಯಾರಿಸ್ ರೌಫ್ 2, ದಿಲ್ಬರ್ ಹುಸೇನ್ 2 ಮತ್ತು ಸಮಿತ್ ಪಾಟೆಲ್ 1 ವಿಕೆಟ್‌ನಿಂದ ಗಮನ ಸೆಳೆದರು. ಬಾಬರ್ ಅಝಾಮ್ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠರೆನಿಸಿದರು.