ಈ ತಿಂಗಳ ಕೊನೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ವಿಶ್ವದ ಚಿತ್ತವನ್ನು ಕದ್ದ ಈ ಟೆಸ್ಟ್ ಆರಂಭಕ್ಕೂ ಮುನ್ನವೇ ಭಾರೀ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾ ಹೇಳಿದ ಹೇಳಿಕೆ ಇಂಗ್ಲೆಂಡ್ ಆಟಗಾರರಿಗೆ ನುಂಗಲಾಗದ ಬಿಸಿ ತುಪ್ಪದಂತೆ ಭಾಸವಾಗುತ್ತಿದೆ.
ಇಂಗ್ಲೆಂಡ್ ತಂಡ ಈಗಾಗಲೇ ಸರಣಿಗೆ ತನ್ನ ತಂಡವನ್ನು ಪ್ರಕಟಿಸಿದೆ. ಆದರೆ, ಟೀಂ ಇಂಡಿಯಾ ಇನ್ನೂ ಪ್ರಕಟಿಸಿಲ್ಲ. ಪ್ರವಾಸಿ ತಂಡದ ಆಟಗಾರರು ಈಗಾಗಲೇ ಭಾರತದ ಪಿಚ್‌ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲ್ಲು ಆರಂಭಿಸಿದ್ದಾರೆ. ಭಾರತಕ್ಕೆ ಬರುವ ಮುನ್ನವೇ ಸ್ಪಿನ್ ಇಂಗ್ಲಿಂಷ್ ಬ್ಯಾಟ್ಸ್‌ಮನ್‌ಗಳ ತಲೆ ಕೆಡಿಸಿದೆ. ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಇತ್ತೀಚೆಗೆ ಭಾರತದ ಪಿಚ್‌ಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಐದು ಟೆಸ್ಟ್‌ಗಳ ಸರಣಿಗೆ ಭಾರತವು ಟರ್ನಿಂಗ್ ಪಿಚ್ ಸಿದ್ಧಪಡಿಸಿದರೆ, ಅದು ವೇಗದ ಬೌಲಿಂಗ್ ದಾಳಿಯ ಬಲವನ್ನು ಕಡಿಮೆ ಮಾಡುತ್ತದೆ ಎಂದು ಜಾನಿ ಬೈರ್‌ಸ್ಟೋವ್ ಹೇಳಿದ್ದಾರೆ.
ಭಾರತವು ವಿವಿಧ ರೀತಿಯ ಪಿಚ್‌ಗಳನ್ನು ಸಿದ್ಧಪಡಿಸಬಹುದು ಎಂದು ಬೈರ್‌ಸ್ಟೋವ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ. ಭಾರತದಲ್ಲಿ ಸಂಪ್ರದಾಯ ಬದಲಾಗಿದೆ. ಟೀಮ್ ಇಂಡಿಯಾ ಬಳಿಯೂ ವಿಶ್ವದ ಸ್ಟಾರ್ ವೇಗದ ಬೌಲರ್‌ಗಳು ಇದ್ದಾರೆ. ಈ ನಿಟ್ಟಿನಲ್ಲಿ ವೇಗದ ಪಿಚ್‌ಗಳನ್ನು ತಯಾರಿಸಬಹುದು. ಆದರೆ, ಅವರು ಟರ್ನಿಂಗ್ ವಿಕೆಟ್‌ಗಳನ್ನು ನಿರ್ಮಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಪಿನ್ ಬೌಲರ್‌ಗಳು ಮೊದಲ ದಿನದಿಂದಲೇ ಮೇಲುಗೈ ಸಾಧಿಸುತ್ತಾರೋ ಇಲ್ಲವೋ ತಿಳಿಯದು. ಏಕೆಂದರೆ ಅವರ ಬಳಿಯೂ ಉತ್ತಮ ವೇಗಿಗಳು ಇದ್ದಾರೆ. ಹೀಗೆ ಮಾಡುವುದರಿಂದ ವೇಗದ ಬೌಲಿಂಗ್ ದಾಳಿಯ ಬಲವನ್ನು ಕಡಿಮೆ ಮಾಡುತ್ತದೆ. ಅವರ ವೇಗದ ಬೌಲಿಂಗ್ ಎಷ್ಟು ಚೆನ್ನಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಭಾರತದಲ್ಲಿ ಸ್ಪಿನ್ ಬೌಲರ್‌ಗಳ ಸವಾಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ನಿಸ್ಸಂಶಯವಾಗಿ ಕಳೆದ ಬಾರಿ ಅಕ್ಷರ್ ಮತ್ತು ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದನ್ನು ನಾವು ಮರೆಯುವಂತಿಲ್ಲ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ದ್ವಿಶತಕ ಸಿಡಿಸಿದ್ದರು. ಮತ್ತು ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು ಎಂದು ತಿಳಿಸಿದ್ದಾರೆ.
ಈ ಸಂಪೂರ್ಣ ಸಂದರ್ಶನದಲ್ಲಿ ಬೈರ್‌ಸ್ಟೋ ಭಾರತೀಯ ಸ್ಪಿನ್ ಬೌಲರ್‌ಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅವರು ನುರಿತ ಸ್ಪಿನ್ನರ್‌ಗಳನ್ನು ಹೊಂದಿದ್ದಾರೆಂದು ನಮಗೆ ತಿಳಿದಿದೆ. ವಿಶೇಷವಾಗಿ ಭಾರತದಲ್ಲಿ ಅವರನ್ನು ಎದುರಿಸುವುದು ಸುಲಭವಲ್ಲ. ಅವರು ನಮಗೆ ಸವಾಲು ಹಾಕುತ್ತಾರೆ ಎಂದು ನಮಗೆ ತಿಳಿದಿದೆ ಎಂದಿದ್ದಾರೆ.
ಅಕ್ಷರ್ ಆಡುತ್ತಾರೋ ಇಲ್ಲವೋ ಅಥವಾ ರವೀಂದ್ರ ಜಡೇಜಾ ಅಥವಾ ಕುಲದೀಪ್ ಯಾದವ್ ಆಡುತ್ತಾರೋ, ಯಾರಿಗೆ ಗೊತ್ತು ಎಂದು ತಿಳಿಸಿದ್ದಾರೆ.
2021 ರಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಾಗ ಸ್ಪಿನ್ನರ್‌ಗಳಿಗೆ ಸೂಕ್ತವಾದ ಪಿಚ್‌ಗಳಲ್ಲಿ 1-3 ಅಂತರದಲ್ಲಿ ಇಂಗ್ಲೆಂಡ್ ಸೋಲನುಭವಿಸಿತ್ತು. ಆಗ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಸ್ಪಿನ್ ಎಸೆತಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇಂದಿಗೂ ಆ ಸೋಲನ್ನು ಮರೆಯಲು ಆಂಗ್ಲರ ತಂಡಕ್ಕೆ ಸಾಧ್ಯವಾಗಿಲ್ಲ.