Ban vs Eng T20: ವಿಶ್ವ ಚಾಂಪಿಯನ್ನರಿಗೆ ಆಘಾತ : ಟಿ20 ಸರಣಿ ವಶಪಡಿಸಿಕೊಂಡ ಬಾಂಗ್ಲಾದೇಶ

ಹಾಲಿ ಟಿ20 ವಿಶ್ವಚಾಂಪಿಯನ್ನರಾದ ಇಂಗ್ಲೆಂಡ್ ತಂಡಕ್ಕೆ ಬಾಂಗ್ಲಾದೇಶ ಆಘಾತ ನೀಡಿದೆ. ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಬಾಂಗ್ಲಾದೇಶ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿದೆ.
ಭಾನುವಾರ ಮೀರ್‌ಪುರದ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಬಾಂಗ್ಲಾದೇಶದ ಬೌಲರ್ ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು.
ಮೆಹಿದಿ ಹಸನ್ ಮೀರಜ್ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಟಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶಕೀಬ್ ಅಲ್ ಹಸನ್ ಮತ್ತು ಹಸನ್ ಮಹಮುದ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಮತ್ತು ನಾಯಕ ಜೋಸ್ ಬಟ್ಲರ್ ಮಾತ್ರ 20 ರನ್‌ಗಳ ಗಡಿದಾಟುವಲ್ಲಿ ಯಶಸ್ವಿಯಾದರು. ಸಾಲ್ಟ್ 25 ರನ್ ಗಳಿಸಿದರೆ, ನಾಯಕ ಬಟ್ಲರ್ 28 ರನ್ ಗಳಿಸಿ ಔಟಾದರು. ಉಳಿದಂತೆ ಮೊಯೀನ್ ಅಲಿ 15 ರನ್, ಸ್ಯಾಮ್ ಕರನ್ 12, ರೆಹಾನ್ ಅಹ್ಮದ್ 11 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಒಂದಂಕಿಗೆ ಔಟಾದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್ ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.

ಆರ್ಚರ್ ಹೋರಾಟ ವ್ಯರ್ಥ, ಗೆದ್ದು ಬೀಗಿದ ಬಾಂಗ್ಲಾದೇಶ
ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಲಿಟ್ಟನ್ ದಾಸ್, ರೋನಿ ತಲುಕ್ದಾರ್ ತಲಾ 9 ರನ್ ಗಳಿಸಿ ಔಟಾದರು. ಆದರೆ, ನಂತರ ಬಂದ ನಜ್ಮುಲ್ ಹೊಸೈನ್ ಶಾಂಟೊ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. 47 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 46 ಗಳಿಸಿದರು.
ಟೋವಿದ್ ಹೃದೋಯ್ 17 ರನ್ ಗಳಿಸಿದರೆ, ಮೆಹಿದಿ ಹಸನ್ ಮೀರಜ್ 20 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಂದರು. ಟಸ್ಕಿನ್ ಅಹಮದ್ 3 ಎಸೆತಗಳಲ್ಲಿ 8 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 18.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 120 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ಜಯ ಸಾಧಿಸಿ ಸಂಭ್ರಮಿಸಿದರು.
ಇಂಗ್ಲೆಂಡ್ ಪರವಾಗಿ ಜೋಫ್ರಾ ಆರ್ಚರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. 4 ಓವರ್ ಗಳಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಪಡೆದರು. ಸ್ಯಾಮ್ ಕರನ್, ರೆಹಾನ್ ಅಹ್ಮದ್ ಮತ್ತು ಮೊಯೀನ್ ಅಲಿ ತಲಾ ಒಂದು ವಿಕೆಟ್ ಪಡೆದರು.

ಉಭಯ ತಂಡಗಳ ಆಡುವ ಬಳಗ
ಇಂಗ್ಲೆಂಡ್ : ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಬೆನ್ ಡಕೆಟ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್.
ಬಾಂಗ್ಲಾದೇಶ : ಲಿಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ತೌಹಿದ್ ಹೃದಯೋಯ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications