ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಬಾಂಗ್ಲಾದೇಶ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಬಾಂಗ್ಲಾದೇಶ ತಂಡ ಒಂದು ಪಂದ್ಯ ಬಾಕಿಯಿರುವಂತೆಯೇ ವಶಕ್ಕೆ ಪಡೆದುಕೊಂಡಿದೆ. ಚಿತ್ಗಾಂಗ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸ್ಪೋಟಕ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶದ ಆರಂಬಿಕ ಆಟಗಾರ ಲಿಟನ್ ದಾಸ್ ದಾಖಲೆ ಬರೆದಿದ್ದಾರೆ.
ಆರಂಭಿಕ ಆಟಗಾರ ಲಿಟನ್ ದಾಸ್ ಬಾಂಗ್ಲಾದೇಶದ ಪರವಾಗಿ ಅತ್ಯಂತ ವೇಗವಾಗಿ ಅರ್ಧ ಶತಕ ಸಿಡಿಸಿದ ದಾಖಲೆಯನ್ನು ಈ ಪಂದ್ಯದಲ್ಲಿ ತಮ್ಮ ಹೆಸರಿಗೆ ಬರೆದಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದಿನ ದಾಖಲೆಯನ್ನು ಅವರು ಮುರಿದಿದ್ದಾರೆ. ಈ ಹಿಂದೆ ಬಾಂಗ್ಲಾದೇಶದ ಪರವಾಗಿ ಅತ್ಯಂತ ವೇಗವಾಗಿ ಅರ್ಧ ಶತಕ ಸಿಡಿಸಿದ ದಾಖಲೆ ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ ಹೆಸರಿನಲ್ಲಿತ್ತು. ಅಶ್ರಫುಲ್ 20 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು. ಆದರೆ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಲಿಟನ್ ದಾಸ್ 18 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದರು.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಸ್ಪೋಟಕ ಪ್ರದರ್ಶನ ನೀಡಿತು. ಮಳೆಯಿಂದಾಗಿ 17 ಓವರ್‌ಗಳಿಗೆ ಕಡಿತವಾದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಬರೊಬ್ಬರಿ 202-3 ರನ್‌ಗಳನ್ನು ಗಳಿಸಿತು. ಲಿಟನ್ ದಾಸ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದು 41 ಎಸೆತಗಳಲ್ಲಿ 83 ರನ್‌ಗಳ ಕೊಡುಗೆ ನೀಡಿದರು. ರೋನಿ ತಾಲೀಕ್‌ದಾರ್ 44 ರನ್ ಶಕೀಬ್ ಅಲ್ ಹಸನ್ 38 ರನ್‌ಗಳ ಕೊಡುಗೆ ನೀಡಿ ಮಿಂಚಿದರು.
ಬಾಂಗ್ಲಾದೇಶ ತಂಡ ನೀಡಿದ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಿಂದಲೇ ಮುಗ್ಗರಿಸಲು ಆರಂಭಿಸಿತ್ತು. ತಂಡದ ಬಹುತೇಕ ಎಲ್ಲಾ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಗಿದ್ದು ಕೆಳ ಕ್ರಮಾಂಕದ ಆಟಗಾರ ಕರ್ಟಿಸ್ ಕ್ಯಾಂಫರ್ ಮಾತ್ರ 30 ಎಸೆತಗಳಲ್ಲಿ 50 ರನ್‌ಗಳಿಸಿ ತಂಡಕ್ಕೆ ಒಂದು ಹಂತದಲ್ಲಿ ನೆರವಾದರು. ಆದರೆ ಇದು ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಾಗಲಿಲ್ಲ. ಅಂತಿಮವಾಗಿ ನಿಗದಿತ 17 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿದ ಐರ್ಲೆಂಡ್ ತಂಡ 77 ರನ್‌ಗಳ ಅಂತರದ ಭಾರಿ ಸೋಲು ಕಂಡಿದೆ.
ಇನ್ನು ಬಾಂಗ್ಲಾದೇಶ ತಂಡದ ಪರವಾಗಿ ಮತ್ತೊಮ್ಮೆ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದು ನಾಯಕ ಶಕೀಬ್ ಅಲ್ ಹಸನ್. ಮೊದಲಿಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಶಕೀಬ್ ಬೌಲಿಂಗ್‌ನಲ್ಲಿ ಐದು ವಿಕೆಟ್ ಕಿತ್ತು ಅಬ್ಬರಿಸಿದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಟಸ್ಕಿನ್ ಅಹ್ಮದ್ ಕೂಡ ಮೂರು ವಿಕೆಟ್ ಸಂಪಾದಿಸಿದರು.
ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್ (ವಿಕೆಟ್ ಕೀಪರ್), ರೋನಿ ತಾಲುಕ್ದಾರ್, ನಜ್ಮುಲ್ ಹೊಸೈನ್ ಶಾಂಟೋ, ಶಮೀಮ್ ಹೊಸೈನ್, ತೌಹಿದ್ ಹೃದಯ್, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್
ಬೆಂಚ್: ಶೋರಿಫುಲ್ ಇಸ್ಲಾಂ, ರಿಶಾದ್ ಹೊಸೈನ್, ಜಾಕರ್ ಅಲಿ
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್ (ನಾಯಕ), ರಾಸ್ ಅಡೈರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್,
ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್, ಬೆಂಜಮಿನ್ ವೈಟ್
ಬೆಂಚ್: ಕ್ರೇಗ್ ಯಂಗ್, ಮ್ಯಾಥ್ಯೂ ಹಂಫ್ರೀಸ್, ಥಾಮಸ್ ಮೇಯಸ್