
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ 3 ಏಕದಿನ ಪಂದ್ಯಗಳ ಸರಣಿ ಭಾನುವಾರ ಆರಂಭಗೊಂಡಿದೆ. ಬಾಂಗ್ಲಾ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ ಮೊದಲನೇ ಪಂದ್ಯದಲ್ಲಿಯೇ ಸೋಲುಂಡಿದೆ. ಢಾಕಾದ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 33 ರನ್‌ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 257 ರನ್‌ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತು. ಬಾಂಗ್ಲಾದೇಶದ ಪರ ತಮೀಮ್ ಇಕ್ಬಾಲ್ 52(70), ಮುಶ್ಪೀಕರ್ ರಹೀಂ 84(87) ಹಾಗೂ ಮಹಮದುಲ್ಲಾ 54(76) ರನ್ ಗಳಿಸಿ ಜವಾಬ್ದಾರಿಯುತ ಆಟವನ್ನು ಆಡಿದರು. ಬಾಂಗ್ಲಾದೇಶ ನೀಡಿದ್ದ 258 ರನ್‌ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 48.1 ಓವರ್‌ಗಳಲ್ಲಿ 224 ರನ್‌ಗಳಿಗೆ ಆಲ್ಔಟ್ ಆಗುವುದರ ಮೂಲಕ 33 ರನ್‌ಗಳ ಸೋಲು ಕಂಡಿತು. ಶ್ರೀಲಂಕಾ ತಂಡದ ವನಿಂದು ಹಸರಂಗ ಅಂತಿಮ ಕ್ಷಣದವರೆಗೂ ಏಕಾಂಗಿ ಹೋರಾಟ ನಡೆಸಿದರೂ ಸಹ ತಂಡ ಗೆಲ್ಲುವಲ್ಲಿ ವಿಫಲವಾಯಿತು. ಲಂಕಾದ ವನಿಂದು ಹಸರಂಗ 60 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು. ಬಾಂಗ್ಲಾದೇಶದ ಪರ ಮೆಹಿದಿ ಹಸನ್ 4 ವಿಕೆಟ್ ಹಾಗೂ ಮುಸ್ತಫಿಜರ್ ರಹಮಾನ್ 3 ವಿಕೆಟ್ ಪಡೆದು ಮಿಂಚಿದರು.
ಮೊದಲನೇ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಬಾಂಗ್ಲಾದೇಶ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನು ಬಾಂಗ್ಲಾ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.