
ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ನೀಲ್ ಮೆಕೆಂಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾವೈರಸ್ ಸೋಂಕಿನ ಸಂದರ್ಭದಲ್ಲಿ ತಾನು ತನ್ನ ಕುಟುಂಬಸ್ಥರ ಜೊತೆಗಿರಬೇಕು ಎಂದು ಮೆಕೆಂಜಿ ಹೇಳಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ತಿಳಿಸಿದೆ.
ದಕ್ಷಿಣ ಆಫ್ರಿಕಾ ಮಾಜಿ ಆಟಗಾರರಾದ ನೀಲ್ ಮೆಕೆಂಜಿ ಅವರು 2018ರ ಜುಲೈನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಜವಾಬ್ದಾರಿ ಹೊತ್ತುಕೊಂಡಿದ್ದರು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದರು.
'ಕೋವಿಡ್ 19ನಿಂದಾಗಿ ವಿಶ್ವ ಸನ್ನಿವೇಶವೇ ಬದಲಾಗಿರುವುದರಿಂದ ಇಂಥ ಸಂಕಷ್ಟದ ಸಮಯದಲ್ಲಿ ತಾನು ದಕ್ಷಿಣ ಆಫ್ರಿಕಾದಲ್ಲಿನ ತನ್ನ ಕುಟುಂಬಸ್ಥರ ಜೊತೆಗಿರಬೇಕಾಗಿದೆ. ಹೀಗಾಗಿ ತಾನು ಬಾಂಗ್ಲಾದೇಶ ಬ್ಯಾಟಿಂಗ್ ಕೋಚ್ ಕರ್ತವ್ಯದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ನೀಲ್ ಖಾತರಿಪಡಿಸಿದ್ದಾರೆ,' ಎಂದು ಬಿಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಝಾಮುದ್ದೀನ್ ಚೌಧರಿ ಹೇಳಿದ್ದಾರೆ.
'ನೀಲ್ ಇಲ್ಲಿ ತುಂಬಾ ಮೆಚ್ಚುಗೆ ಪಡೆದ ಕೋಚ್ ಆಗಿದ್ದರು. ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳಿಗಾಗಿ ಅವರ ಕಾರ್ಯಕ್ಕೆ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ,' ಎಂದು ನಿಝಾಮ್ ಹೇಳಿಕೊಂಡಿದ್ದಾರೆ.