ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದಂತೆಯೇ, ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದರು.
2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಕೇವಲ 100 ದಿನಗಳಿಗಿಂತ ಕಡಿಮೆ ಸಮಯವಿದೆ, ಅಲ್ಲದೆ, ಮುಂದಿನ ತಿಂಗಳ ಕೊನೆಯಲ್ಲಿ 2023ರ ಏಷ್ಯಾ ಕಪ್ ಸಹ ನಡೆಯಲಿದೆ. ಅದಕ್ಕೂ ಮುನ್ನವೇ ಬಾಂಗ್ಲಾದೇಶ ತಂಡದ ಅನುಭವಿ ಆಟಗಾರ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು.

ಬಾಂಗ್ಲಾದೇಶ ತಂಡವು ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಸೋತ ಒಂದು ದಿನದ ಬಳಿಕ ತಮೀಮ್ ಇಕ್ಬಾಲ್ ಗುರುವಾರ ನಿವೃತ್ತಿ ಘೋಷಣೆ ಮಾಡಿ ಕಣ್ಣೀರಿಟ್ಟರು.
ತಮೀಮ್ ಇಕ್ಬಾಲ್ ಅವರು ಬಾಂಗ್ಲಾದೇಶ ತಂಡಕ್ಕಾಗಿ 70 ಟೆಸ್ಟ್ ಪಂದ್ಯಗಳು, 241 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ ಹಾಗೂ 15,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳನ್ನು ಬಾರಿಸಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ತಮೀಮ್ ಇಕ್ಬಾಲ್ ಅವರು ಕಳೆದ 16 ವರ್ಷಗಳಿಂದ ಬೆಂಬಲ ನೀಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
"ಇದು ಕ್ರಿಕೆಟ್‌ಗೆ ಅಂತ್ಯ ಹೇಳುವ ದಿನವಾಗಿದೆ. ನಾನು ನನ್ನ ಕೈಲಾದಷ್ಟು ನೀಡಿದ್ದೇನೆ. ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಈ ಕ್ಷಣದಿಂದ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿದ್ದೇನೆ," ಎಂದು ತಮೀಮ್ ಇಕ್ಬಾಲ್ ಹೇಳಿದರು.
"ನನ್ನ ಎಲ್ಲಾ ತಂಡದ ಸಹ ಆಟಗಾರರು, ಕೋಚ್ ಸಿಬ್ಬಂದಿ, ಬಿಸಿಬಿ ಅಧಿಕಾರಿಗಳು, ನನ್ನ ಕುಟುಂಬ ಸದಸ್ಯರು ಮತ್ತು ನನ್ನ ಸುದೀರ್ಘ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ," ಎಂದರು.
"ನಾನು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ನನ್ನ ಮೇಲಿನ ವಿಶ್ವಾಸವು ಬಾಂಗ್ಲಾದೇಶಕ್ಕೆ ನನ್ನ ಅತ್ಯುತ್ತಮವಾಗಿದ್ದನ್ನು ನೀಡಲು ನನಗೆ ಸ್ಫೂರ್ತಿ ನೀಡಿದೆ. ನನ್ನ ಜೀವನದ ಮುಂದಿನ ಅಧ್ಯಾಯಕ್ಕಾಗಿ ನಿಮ್ಮ ಶುಭಾಶಯ ಕೇಳಲು ನಾನು ಬಯಸುತ್ತೇನೆ. ದಯವಿಟ್ಟು ನೀವು ನನಗಾಗಿ ಪ್ರಾರ್ಥಿಸಿ," ಎಂದು ತಮೀಮ್ ಇಕ್ಬಾಲ್ ತಿಳಿಸಿದರು.
ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವಂತೆಯೇ ತಮೀಮ್ ಇಕ್ಬಾಲ್ ನಿವೃತ್ತಿ ಹೇಳಿದ್ದಾರೆ. ಇದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಆಘಾತಕಾರಿ ಸುದ್ದಿಯಾಗಿದೆ. ತಂಡವನ್ನು ಮರುನಿರ್ಮಾಣ ಮಾಡಲು ಬಾಂಗ್ಲಾದೇಶಕ್ಕೆ ಇದೀಗ ಹೊಸ ನಾಯಕನ ಅಗತ್ಯವಿದೆ.
ಬಾಂಗ್ಲಾದೇಶ ತಂಡದ ಟಿ20 ನಾಯಕನೂ ಆಗಿರುವ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಸದ್ಯ ಸಂಭಾವ್ಯ ಆಯ್ಕೆಯಂತೆ ಕಾಣುತ್ತಾರೆ. ಟೆಸ್ಟ್ ತಂಡದ ನಾಯಕ ಲಿಟ್ಟನ್ ದಾಸ್ ಅವರನ್ನೂ ಏಕದಿನ ತಂಡದ ನಾಯಕನ ಜವಾಬ್ದಾರಿಗೆ ಪರಿಗಣಿಸಬಹುದು.
ತಮೀಮ್ ಇಕ್ಬಾಲ್ ಕ್ರಿಕೆಟ್ ವೃತ್ತಿಜೀವನ
ತಮೀಮ್ ಇಕ್ಬಾಲ್ ಅವರು ಫೆಬ್ರವರಿ 2007ರಲ್ಲಿ ತಮ್ಮ ಅಂತತಾರಾಷ್ಟ್ರೀಯ ವೃತ್ತಿಜೀವನಕ್ಕೆ ಕಾಲಿರಿಸಿದರು. 2007ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವು ಭಾರತವನ್ನು ಸೋಲಿಸಿದ ಪಂದ್ಯದಲ್ಲಿ ಪಂದ್ಯ-ವಿಜೇತ ಅರ್ಧಶತಕ ಬಾರಿಸಿದ್ದರು.
ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶಕ್ಕಾಗಿ ಅತಿ ಹೆಚ್ಚು ರನ್ ಮತ್ತು ಶತಕಗಳನ್ನು ಗಳಿಸಿದ ನಂತರ, ಇಕ್ಬಾಲ್ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ತಮೀಮ್ ಇಕ್ಬಾಲ್ 8313 ಏಕದಿನ ರನ್ ಹಾಗೂ 14 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಸ್ಟೈಲಿಶ್ ಎಡಗೈ ಬ್ಯಾಟರ್ ತಮೀಮ್ ಇಕ್ಬಾಲ್ 70 ಟೆಸ್ಟ್ ಪಂದ್ಯಗಳಲ್ಲಿ 10 ಶತಕಗಳೊಂದಿಗೆ 38.89ರ ಸರಾಸರಿಯಲ್ಲಿ 5134 ರನ್ ಗಳಿಸಿದ ಕಾರಣ ಬಿಳಿ ಜೆರ್ಸಿಯಲ್ಲಿಯೂ ಮಿಂಚಿದ್ದಾರೆ.