ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಿದೆ. ಈ ಟೂರ್ನಿಯ ಸೂಪರ್ 8 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿವೆ. ಬಾಂಗ್ಲಾದೇಶ ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದರೂ ಸಹ, ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಪ್ರವಾಸ ಬೆಳೆಸಲು ಹಿಂದೇಟು ಹಾಕಿತ್ತು. ಆ ಬಳಿಕ ಐಸಿಸಿ ಸಹ ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತ್ತು. ಈ ಬಗ್ಗೆ ಬಾಂಗ್ಲಾದೇಶ ಕಡೆಯಿಂದ ದಿನಕ್ಕೊಂದು ಹೇಳಿಕೆಗಳು ಬರುತ್ತಿವೆ.
ಬಾಂಗ್ಲಾದೇಶ ತಂಡದ ಹಿರಿಯ ಸಹಾಯಕ ಕೋಚ್ ಮೊಹಮ್ಮದ್ ಸಲಾವುದ್ದೀನ್ ಅವರು ಮಾಜಿ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಕ್ರೀಡಾ ಸಚಿವರ ಆತುರದ ನಿರ್ಧಾರಗಳು ಆಟಗಾರರ ಕನಸನ್ನು ನುಚ್ಚು ನೂರು ಮಾಡಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅವರ ಒಂದು ತಪ್ಪು ನಿರ್ಧಾರದಿಂದ ಹಲವು ಯುವ ಆಟಗಾರರ ಜೀವಮಾನದ ಕನಸು ಛಿದ್ರವಾಗಿದೆ. ಈ ಸುದ್ದಿಯನ್ನು ತಿಳಿದ ಬಳಿಕ ಇಬ್ಬರು ಆಟಗಾರರು ಕೋಮಾದಂತಹ ಸ್ಥಿತಿಗೆ ಹೋಗಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.

ಯುವ ಆಟಗಾರರು ವಿಶ್ವಕಪ್‌ನಲ್ಲಿ ಆಡಲು ಬಯಸಿದಾಗ, ಆ ಆಟಗಾರರು ತಮ್ಮೊಂದಿಗೆ ದೊಡ್ಡ ಕನಸಿನ ಮೂಟೆಯನ್ನು ಹೊತ್ತುಕೊಂಡು ಬರುತ್ತಾರೆ. ಅವರು ಕಷ್ಟ ಪಟ್ಟ ಕಂಡ ಕನಸನ್ನು ಅಧಿಕಾರಿಗಳು ಒಂದು ಕ್ಷಣದಲ್ಲಿ ಭಗ್ನಗೊಳಿಸುತ್ತಾರೆ. ಈ ದೊಡ್ಡ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿಯಲ್ಲಿದ್ದರೆ ಓಕೆ ಇಲ್ಲದಿದ್ದರೆ ಆಟಗಾರರ ವೃತ್ತಿ ಜೀವನಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಮೊಹಮ್ಮದ್ ಸಲಾವುದ್ದೀನ್ ತಿಳಿಸಿದ್ದಾರೆ.
ಆಸಿಫ್ ನಜ್ರುಲ್ ಹೇಳಿಕೆ ವ್ಯತಿರಿಕ್ತವಾದಾಗ ಈ ವಿಷಯ ಉಲ್ಭಣಗೊಂಡಿತು. ಆರಂಭದಲ್ಲಿ ಭಾರತದಲ್ಲಿ ಪಂದ್ಯ ಆಡದಿರುವುದು ತಮ್ಮ ನಿರ್ಧಾರ ಎಂದು ಆಸಿಫ್ ತಿಳಿಸಿದ್ದರು. ಆದರೆ ಬಳಿಕ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಬಿಸಿಬಿ ಆಟಗಾರರೊಂದಿಗೆ ಸಮಾಲೋಚಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದರು. ಆದರೆ ಇದು ಹಸಿ ಸುಳ್ಳು. ಆಸಿಫ್ ಆಟಗಾರರೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಮೊಹಮ್ಮದ್ ಸಲಾವುದ್ದೀನ್ ಬಹಿರಂಗ ಪಡಿಸಿದ್ದಾರೆ. ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸುವ ನಿರ್ಧಾರವನ್ನು ಸರ್ಕಾರ ಹೇರಿದೆ ಮತ್ತು ಆಟಗಾರರು ಅಥವಾ ತರಬೇತುದಾರರು ಅದರಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದೇ ಇರುವುದು ಸರ್ಕಾರದ ನಿರ್ಧಾರ. ಆಟಗಾರರ ನಿರ್ಧಾರವಾಗಿರಲಿಲ್ಲ ಎಂದು ಮೊಹಮ್ಮದ್ ಸಲಾವುದ್ದೀನ್ ತಿಳಿಸಿದ್ದರು. ಅಲ್ಲದೆ ಮೆಗಾ ಟೂರ್ನಿಯಲ್ಲಿ ಆಡದೆ ಇರುವುದಕ್ಕೆ ಆಟಗಾರರು ತೀವ್ರ ನಿರಾಶೆಗೊಂಡರು ಮತ್ತು ಅವರಲ್ಲಿ ಇಬ್ಬರು ತೀವ್ರ ಅಸ್ವಸ್ಥರಾದರು ಎಂದು ಬಹಿರಂಗ ಪಡಿಸಿದ್ದಾರೆ. ಈಗ ಆಸಿಫ್ ನಜ್ರುಲ್ ಎಲ್ಲ ಆರೋಪಗಳಿಗೆ ನಮ್ಮತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಸಹಾಯಕ ಕೋಚ್ ಮೊಹಮ್ಮದ್ ಸಲಾವುದ್ದೀನ್ ಹೇಳಿದ್ದಾರೆ.
ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನಲ್ಲಿ ಕೋಲ್ಕತ್ತ ಹಾಗೂ ಮುಂಬೈನಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಡಬೇಕಿತ್ತು. ಆದರೆ ಭದ್ರತಾ ಕಾರಣಗಳಿಂದ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂದು ಬಾಂಗ್ಲಾದೇಶ ಮೊದಲು ತಿಳಿಸಿತ್ತು.