ಟಿ ಟ್ವೆಂಟಿ: ಬಾಂಗ್ಲಾ ವಿರುದ್ಧ ಹೀನಾಯ ಸೋಲನುಭವಿಸಿದ ಆಸ್ಟ್ರೇಲಿಯಾ, ಇತಿಹಾಸ ಬರೆದ ಬಾಂಗ್ಲಾ !

ಬಾಂಗ್ಲಾ ದೇಶದ ಪ್ರವಾಸವನ್ನು ಕೈಗೊಂಡಿರುವ ಆಸ್ಟ್ರೇಲಿಯಾ ತಂಡ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಆಡುತ್ತಿದೆ. ಮಂಗಳವಾರದಂದು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ನಡುವಿನ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯ ತಂಡ ಹೀನಾಯವಾಗಿ ಸೋಲುವುದರ ಮೂಲಕ ಸರಣಿಯಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ.
ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ದೇಶದ ನಡುವಿನ 5 ಪಂದ್ಯಗಳ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ಬಾಂಗ್ಲಾದೇಶದ ಢಾಕಾದಲ್ಲಿನ ಶೇರ್ ಎ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಾಂಗ್ಲಾದೇಶ ತಂಡ 23 ರನ್‌ಗಳ ಅಂತರದಲ್ಲಿ ಸೋಲಿಸುವುದರ ಮೂಲಕ ಸರಣಿಯಲ್ಲಿ ಶುಭಾರಂಭವನ್ನು ಮಾಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಬಾಂಗ್ಲಾದೇಶದ ವಿರುದ್ಧ ಉತ್ತಮವಾಗಿ ಬೌಲಿಂಗ್ ಪ್ರದರ್ಶನವನ್ನು ಮಾಡಿತು. 20 ಓವರ್‌ಗಳಲ್ಲಿ 131 ರನ್ ಕಲೆಹಾಕಿದ ಬಾಂಗ್ಲಾದೇಶ 7 ವಿಕೆಟ್‍ಗಳನ್ನು ಕಳೆದುಕೊಂಡಿತು. ಹೀಗೆ ಸಾಧಾರಣ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ ಆಸ್ಟ್ರೇಲಿಯಾಗೆ ಗೆಲ್ಲಲು 132 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಬಾಂಗ್ಲಾದೇಶದ ಪರ ನಯೀಮ್ 30, ಶಕೀಬ್ ಅಲ್ ಹಸನ್ 36, ಮಹಮದುಲ್ಲ 20 ಹಾಗೂ ಆಫಿಫ್ ಹೊಸೈನ್ 23 ರನ್ ಗಳಿಸಿ ಜವಾಬ್ಧಾರಿಯುತ ಆಟವನ್ನಾಡಿದರು. ಆಸ್ಟ್ರೇಲಿಯಾ ತಂಡದ ಪರ ಹೇಜಲ್‌ವುಡ್ 3, ಮಿಚೆಲ್ ಸ್ಟಾರ್ಕ್ 2, ಆ್ಯಡಮ್ ಜಂಪಾ 1 ಮತ್ತು ಆ್ಯಂಡ್ರೊ ಟೈ 1 ವಿಕೆಟ್ ಪಡೆದರು.

ಕೇವಲ 108 ರನ್‌ಗೆ ಆಸ್ಟ್ರೇಲಿಯಾ ಆಟ ಅಂತ್ಯ
ಹೀಗೆ ಕಡಿಮೆ ಮೊತ್ತಕ್ಕೆ ಬಾಂಗ್ಲಾದೇಶವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ ತಂಡ 132 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಬಾಂಗ್ಲಾದೇಶದ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. 20 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಬಾಂಗ್ಲಾದೇಶದ ವಿರುದ್ಧ 23 ರನ್‌ಗಳ ಹೀನಾಯ ಸೋಲನ್ನು ಆಸ್ಟ್ರೇಲಿಯ ತಂಡ ಅನುಭವಿಸಿತು. ಈ ಮೂಲಕ 5 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾ ವಿರುದ್ಧ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ನಸುಮ್ ಅಹ್ಮದ್ ಮ್ಯಾಚ್ ವಿನ್ನರ್
ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ 45 ರನ್ ಬಾರಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ 20ರ ಗಡಿ ದಾಟಲೇ ಇಲ್ಲ. ಬಾಂಗ್ಲಾದೇಶದ ಪರ ನಸುಮ್ ಅಹ್ಮದ್ 4 ವಿಕೆಟ್, ಮುಸ್ತಫಿಜರ್ ರಹಮಾನ್ ಹಾಗೂ ಶೊರಿಫುಲ್ ಇಸ್ಲಾಂ ತಲಾ 2 ವಿಕೆಟ್ ಮತ್ತು ಶಕಿಬ್ ಅಲ್ ಹಸನ್ ಹಾಗೂ ಮಹೆದಿ ಹಸನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಆಸ್ಟ್ರೇಲಿಯ ತಂಡದ ಪ್ರಮುಖ 4 ವಿಕೆಟ್ ಪಡೆದು ಬಾಂಗ್ಲಾದೇಶದ ಭರ್ಜರಿ ಗೆಲುವಿಗೆ ಕಾರಣಕರ್ತರಾದ ನಸುಮ್ ಅಹ್ಮದ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮುಂದಿನ ಪಂದ್ಯ
ಇನ್ನು ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ದೇಶಗಳ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯ ಬುಧವಾರದಂದು (ಆಗಸ್ಟ್ 4 ) ನಡೆಯಲಿದ್ದು ಆಸ್ಟ್ರೇಲಿಯಾ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಗೆಲುವಿನ ಹಾದಿಗೆ ಮರಳುತ್ತಾ ಅಥವಾ ಪುನಃ ಬಾಂಗ್ಲಾ ಎದುರು ಸೋತು ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಾ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications