ಭಾರತ ವಿರುದ್ಧದ ಟೆಸ್ಟ್ ಸರಣಿ ಹಾಗೂ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ತಂಡ ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಗದ್ದಲ ಉಂಟಾಗಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಚ್ಚರಿ ನಿರ್ಧಾರವನ್ನು ತೆಗೆದುಕೊಂಡಿದೆ.
ಬಾಂಗ್ಲಾದೇಶ ತಂಡದ ಮುಖ್ಯ ಕೋಚ್ ಚಂಡಿಕಾ ಹತುರುಸಿಂಗ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಸಿಬಿ ಅಮಾನತುಗೊಳಿಸಿದೆ. ಶಿಸ್ತಿನ ಆಧಾರದ ಮೇಲೆ ಚಂಡಿಕಾ ಹತುರುಸಿಂಗ ಅವರನ್ನು ಅಮಾನತುಗೊಳಿಸಿರುವುದಾಗಿ ಬಿಸಿಬಿ ಮಾಹಿತಿ ನೀಡಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಸಿಬಿ ಅಧ್ಯಕ್ಷ ಫಾರೂಕ್ ಅಹ್ಮದ್ ಅವರು ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹತುರುಸಿಂಗ ಬದಲಿಗೆ ವೆಸ್ಟ್ ಇಂಡೀಸ್‌ನ ಮಾಜಿ ಕೋಚ್ ಫಿಲ್ ಸಿಮನ್ಸ್ ಅವರನ್ನು ಚಾಂಪಿಯನ್ಸ್ ಟ್ರೋಫಿ 2025 ರವರೆಗೆ ಹಂಗಾಮಿ ಕೋಚ್ ಆಗಿ ನೇಮಿಸಲಾಗಿದೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರದ ವೇಳೆ ನಜ್ಮುಲ್ ಹಸನ್ ಅವರು ಬಿಸಿಬಿ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಅವರ ಸ್ಥಾನಕ್ಕೆ ಇದೀಗ ಫಾರೂಕ್ ಅಹ್ಮದ್ ನೇಮಕಗೊಂಡಿದ್ದಾರೆ.
ಚಂಡಿಕಾ ಹತುರುಸಿಂಗ್ ಅವರು 2023ರಲ್ಲಿ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿಯು ಚಾಂಪಿಯನ್ಸ್ ಟ್ರೋಫಿ 2025 ರವರೆಗೆ ಇತ್ತು. ಆದರೆ ಅವರನ್ನು ಮಧ್ಯದಲ್ಲಿ ವಜಾಗೊಳಿಸಲಾಗಿದೆ. ವರದಿಗಳ ಪ್ರಕಾರ, ಚಂಡಿಕಾ ಹತುರುಸಿಂಗ 2023ರ ಏಕದಿನ ವಿಶ್ವಕಪ್‌ನಲ್ಲಿ ತಂಡದ ಆಟಗಾರನಿಗೆ ಕಪಾಳಮೋಕ್ಷ ಮಾಡಿದ್ದರು. ಇದಲ್ಲದೇ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವ ಇನ್ನೊಂದು ಕಾರಣವೂ ಬೆಳಕಿಗೆ ಬಂದಿದೆ.
ಈ ಕುರಿತು ಬಿಸಿಬಿ ನೂತನ ಅಧ್ಯಕ್ಷ ಫಾರೂಕ್ ಅಹ್ಮದ್ ಮಾಹಿತಿ ನೀಡಿದ್ದಾರೆ. 'ಹತುರುಸಿಂಗ್ ವಿರುದ್ಧ ಎರಡು ಆರೋಪಗಳಿವೆ. ಮೊದಲ ಆರೋಪವೆಂದರೆ ಆಟಗಾರನ ಮೇಲೆ ಹಲ್ಲೆ ಮಾಡಿರುವುದು ಮತ್ತು ಎರಡನೇಯದು ಒಪ್ಪಂದಕ್ಕಿಂತ ಹೆಚ್ಚು ರಜೆ ತೆಗೆದುಕೊಂಡಿದ್ದಾರೆ.
ಹತುರುಸಿಂಗ 2023ರ ಏಕದಿನ ವಿಶ್ವಕಪ್‌ಗೂ ಮುನ್ನ ಎರಡನೇ ಬಾರಿಗೆ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿದ್ದರು. ಆದರೆ, ಮೊದಲ ಅವಧಿಯಲ್ಲಿ ಅವರು ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. 2014 ರಿಂದ 2017 ರವರೆಗೆ, ಬಾಂಗ್ಲಾದೇಶವು ಅಗ್ರ ತಂಡಗಳ ವಿರುದ್ಧ ಏಕದಿನ ಸರಣಿಯಲ್ಲಿ ಯಶಸ್ಸನ್ನು ಸಾಧಿಸಿತು. 2015ರ ವಿಶ್ವಕಪ್‌ನ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿತು.
ಹತುರುಸಿಂಗ ಎರಡನೇ ಹಂತದ ಅಧಿಕಾರಿವಧಿಯಲ್ಲಿ ಬಾಂಗ್ಲಾದೇಶ ತಂಡವು 10 ಟೆಸ್ಟ್ ಪಂದ್ಯಗಳಲ್ಲಿ 5, 35 ಏಕದಿನ ಪಂದ್ಯಗಳಲ್ಲಿ 13 ಮತ್ತು 35 ಟಿ20 ಪಂದ್ಯಗಳಲ್ಲಿ 19 ಅನ್ನು ಗೆದ್ದಿತ್ತು. ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆದ್ದಿತ್ತು. ಆದರೆ ಐಸಿಸಿ ಟೂರ್ನಿಗಳಲ್ಲಿ ಅವರ ಸಾಧನೆ ಸಾಧಾರಣವಾಗಿತ್ತು. 2023ರ ಏಕದಿನ ವಿಶ್ವಕಪ್ ಮತ್ತು 2024ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ನಿರಾಶಾದಾಯಕ ಪ್ರದರ್ಶನವು ಮುಖ್ಯ ಕೋಚ್‌ನ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತು.